
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ಏಕಸಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಮೂರು ಪಂದ್ಯದಲ್ಲಿಯೂ ಮೊದಲ ಎಸೆತಕ್ಕೇ ವಿಎಕಟ್ ಕಳೆದುಕೊಂಡು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಪ್ರತಿಕ್ರಿಯೆ ನೀಡಿದ್ದು ಸೂರ್ಯಕುಮಾರ್ ಯಾದವ್ ವೈಫಲ್ಯಕ್ಕೆ ಯಾರು ಹೊಣೆ ಎಂಬುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಸೂರ್ಯಕುಮಾರ್ ಯಾದವ್ ವೈಫಲ್ಯಕ್ಕೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಹೊಣೆ ಎಂದು ದೂರಿದ್ದಾರೆ ದಾನಿಶ್ ಕನೆರಿಯಾ. ಸೂರ್ಯಕುಮಾರ್ ಯಾದವ್ ಮೂರು ಗೋಲ್ಡನ್ ಡಕ್‌ಗೆ ಬಲಿಯಾಗಲು ಅವರೇ ಕಾರಣ ಎಂದಿದ್ದಾರೆ ಪಾಕ್ ಮಾಜಿ ಆಟಗಾರ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೂರ್ಯಕುಮಾರ್ ಯಾದವ್ ಪಾಲಿಗೆ ದುಃಸ್ವಪ್ನವಾಗಿ ಕಾಡಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಮಿಚೆಲ್ ಸ್ಟಾರ್ಕ್ ಎಸೆದ ಎಸೆತದಲ್ಲಿ ಮೊದಲ ಎಸೆತಕ್ಕೇ ಎಲ್‌ಬಿಡ್ಲ್ಯು ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದರೆ ಅಂತಿಮ ಪಂದ್ಯದಲ್ಲಿ ಆಶ್ಟನ್ ಅಗರ್ ಅವರಿಗೆ ಗೋಲ್ಡನ್ ಡಕ್ ಆಗುವ ಮೂಲಕ ಬಲಿಯಾಗಿದ್ದಾರೆ.
ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್‌ಗಳ ಅಂತರದಿಂದ ಆಸ್ಟ್ರೇಲಿಯಾಗೆ ಶರಣಾಗುವ ಮೂಲಕ ಸರಣಿ ಸೋಲು ಕಂಡಿತು. ಈ ಮೂಲಕ ಸುದೀರ್ಘ ಕಾಲದ ಬಳಿಕ ಭಾರತ ತಂಡ ತವರಿನಲ್ಲಿ ಏಕದಿನ ಸರಣಿ ಸೋಲು ಕಂಡಂತಾಗಿದೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ದಾನಿಶ್ ಕನೆರಿಯಾ ಸೂರ್ಯಕುಮಾರ್ ಯಾದವ್ ವಿಚಾರವಾಗಿ ಭಾರತದ ಮ್ಯಾನೇಜ್‌ಮೆಂಟ್ ನಿಲುವಿಕೆ ಅಸಮಾಧಾನ ವ್ಯಕ್ತಪಡಿಸಿದರು. ಭಾರತ ತಂಡದ ಮ್ಯಾನೇಜ್‌ಮೆಂಟ್ ಸೂರ್ಯಕುಮಾರ್ ಮೇಲೆ ಭರವಸೆಯನ್ನು ಹೊಂದಿರಲಿಲ್ಲ ಎಂದಿದ್ದಾರೆ ದಾನಿಶ್ ಕನೆರಿಯಾ.
ಸೂರ್ಯಕುಮಾರ್ ಯಾದವ್ ಫಾರ್ಮ್ ಕಳೆದುಕೊಂಡಿದ್ದಾಗ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ ಕನೆರಿಯಾ. ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ್ದರು. ಈ ಬಗ್ಗೆ ದಾನಿಶ್ ಕನೆರಿಯಾ, ಭಾರತ ತಂಡದ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿಗೆ ಅನುಸರಿಸಿದ ಮಾದರಿಯನ್ನೇ ಸೂರ್ಯಕುಮಾರ್ ಯಾದವ್ ವಿಚಾರದಲ್ಲಿಯೂ ಅನುಸರಿಸಬೇಕಾಗಿತ್ತು ಎಂದಿದ್ದಾರೆ.
ಮುಂಬೈನ ಆಟಗಾರ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್‌ಗೆ ಬಲಿಯಾಗಿರುವುದಕ್ಕೆ ಮ್ಯಾನೇಜ್‌ಮೆಂಟ್‌ನ ಜೊತೆಗೆ ನಾಯಕ ರೋಹಿತ್ ಶರ್ಮಾ ಮಾಡಿದ ತಪ್ಪು ಕಾರಣ ಎಂದಿದ್ದಾರೆ. "ಸೂರ್ಯಕುಮಾರ್ ಯಾದವ್ ಮೇಲೆ ಮ್ಯಾನೇಜ್‌ಮೆಂಟ್ ಅಗತ್ಯ ಭರವಸೆ ಹೊಂದಿರಲಿಲ್ಲ. ಆತನ ಕ್ರಮಾಂಕದಲ್ಲಿ ಬದಲಾವಣೆ ಮಾಡಬಾರದಾಗಿತ್ತು. ವಿರಾಟ್ ಕೊಹ್ಲಿ ಕೂಡ ತಮ್ಮ ಲಯಕ್ಕೆ ಮರಳಲು ಕಾಲಾವಕಾಶ ತೆಗೆದುಕೊಂಡರಾದರೂ ಅವರ ಕ್ರಮಾಂಕದಲ್ಲಿ ಬದಲಾವಣೆ ಮಾಡಿರಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ವಿಚಾರದಲ್ಲಿ ಹೀಗ್ಯಾಕಾಯಿತು? ಹೀಗಾಗಿ ಸೂರ್ಯಕುಮಾರ್ ಯಾದವ ್ಗೋಲ್ಡನ್ ಡಕ್‌ಗೆ ಭಾರತದ ಮ್ಯಾನೇಜ್‌ಮೆಂಟ್ ಹೊಣೆಯಾಗಬೇಕು" ಎಂದಿದ್ದಾರೆ ದಾನಿಶ್ ಕನೆರಿಯಾ.