ಪಂತ್ ವಿಚಾರವಾಗಿ ಈ ಕಹಿ ಸತ್ಯವನ್ನು ಭಾರತೀಯರು ಒಪ್ಪಿಕೊಳ್ಳಲೇಬೇಕು: ದಾನಿಶ್ ಕನೇರಿಯಾ

ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸವನ್ನು ಮುಕ್ತಾಯಗೊಳಿಸಿದ್ದು ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಕಿವೀಸ್ ಸರಣಿಯಲ್ಲಿ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ರಿಷಭ್ ಪಂತ್ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಮತ್ತೆ ಮತ್ತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಕಾರಣದಿಂದಾಗಿ ಸಂಜು ಸ್ಯಾಮ್ಸನ್‌ಗೆ ಅವಕಾಶಗಳು ದೊರೆಯುತ್ತಿಲ್ಲ ಎಂಬ ಬಗ್ಗೆ ಟೀಕೆಗಳು ಕೂಡ ಜೋರಾಗಿ ಕೇಳಿ ಬರುತ್ತಿದೆ.
ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪದೇ ಪದೇ ರಿಷಭ್ ಪಂತ್‌ಗೆ ಅವಕಾಶ ನೀಡುತ್ತಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಉದ್ದೇಶಿಸಿ ದಾನಿಶ್ ಕನೇರಿಯಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯರು ರಿಷಭ್ ಪಂತ್ ವಿಚಾರವಾಗಿ ಒಂದು ಸತ್ಯವನ್ನು ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ.

ಪಂತ್‌ಗೆ ಬೆಂಬಲ ನೀಡಿದ್ದು ಸಾಕು
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‌ಗೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಅತಿಯಾಗಿ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ರಿಷಭ್ ಪಂತ್‌ಗೆ ಎಲ್ಲಾ ಕ್ರಮಾಂಕಗಳಲ್ಲಿಯೂ ಅವಕಾಶವನ್ನು ನೀಡಲಾಗಿದೆ. ಆದರೆ ಎಷ್ಟೇ ಅವಕಾಶ ನಿಡಿದರೂ ಅವರು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ ರಿಷಬ್ ಪಂತ್.

ಪಂತ್ ವೈಟ್‌ಬಾಲ್ ಆಟಗಾರ ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು
ಈ ಸಂದರ್ಭದಲ್ಲಿ ದಾನಿಶ್ ಕನೇರಿಯಾ ಭಾರತೀಯರು ರಿಷಬ್ ಪಂತ್ ವಿಚಾರವಾಗಿ ಒಂದು ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದ ಎಂದಿದ್ದಾರೆ. "ರಿಷಭ್ ಪಂತ್ ವೈಟ್‌ಬಾಲ್ ಕ್ರಿಕೆಟರ್ ಅಲ್ಲ ಎಂಬ ಸತ್ಯವನ್ನು ಭಾರತೀಯರು ಒಪ್ಪಿಕೊಳ್ಳಲೇಬೇಕಿದೆ. ಆತನನ್ನು ಎಲ್ಲಾ ಕ್ರಮಾಂಕದಲ್ಲಿಯೂ ಆಡಿಸುವ ಪ್ರಯತ್ನ ನಡೆಸಲಾಗಿದ್ದು ರನ್‌ಗಳಿಸಲು ಅವಕಾಶ ನೀಡಲಾಗಿದೆ. ಆದರೆ ಸಂಜು ಸ್ಯಾಮ್ಸನ್ ಮಾಡಿದ ತಪ್ಪೇನು? ಆತ 36 ರನ್‌ಗಳಿಸಿ ತಪ್ಪು ಮಾಡಿದರೇ?" ಎಂದು ದಾನಿಶ್ ಕನೇರಿಯಾ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.
ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್

ದೀಪಕ್ ಹೂಡಾ ಬಗ್ಗೆಯೂ ಕನೆರಿಯಾ ಹೇಳಿಕೆ
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಆಲ್‌ರೌಂಡರ್ ದೀಪಕ್ ಹೂಡಾ ಬಗ್ಗೆಯೂ ಮಾತನಾಡಿದ್ದಾರೆ. "ದೀಪಕ್ ಹೂಡಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾಗ ಅವರಿಗೆ ಆಡುವ ಅವಕಾಶ ನೀಡಿರಲಿಲ್ಲ. ಅದು ಅವರ ಆತ್ಮವಿಶ್ವಾಸಕ್ಕೆ ಘಾಸಿ ಮಾಡಿದೆ. ಈಗ ಅವರಿಗೆ ಕಠಿಣ ಪರಿಸ್ಥಿತಿಯಲ್ಲಿ ಆಡುವ ಅವಕಾಶ ದೊರೆಯಿತು ಆದರೆ ಅವರಿಗೆ ಇಂಥಾ ಸಂದರ್ಭ ಏನು ಮಾಡಬೇಕೆಂದೇ ತಿಳಿಯಲಿಲ್ಲ" ಎಂದಿದ್ದಾರೆ ದಾನಿಶ್ ಕನೇರಿಯಾ.

ಭಾರತದ ವಿರುದ್ಧ ಏಕದಿನ ಸರಣಿ ವಶಕ್ಕೆ ಪಡೆದ ಕಿವೀಸ್
ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದರೆ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ನಿರಾಸೆಯಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿದ ಪರಿಣಾಮವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹೊರತಾಗಿಯೂ ಟೀಮ್ ಇಂಡಿಯಾ ಸೋಲು ಅನುಭವಿಸಿತು. ಬಳಿಕ ನಡೆದ ಎರಡು ಪಂದ್ಯಗಳು ಕೂಡ ಮಳೆಗೆ ಆಹುತಿಯಾಯಿತು. ಹೀಗಾಗಿ ನ್ಯೂಜಿಲೆಂಡ್ ತಂಡ 1-0 ಅಂತರದಿಂದ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications