
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮತ್ತು ಡೇವಿಡ್ ವಾರ್ನರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆಯೇ ಚರ್ಚೆಯಾಗಿದ್ದ ವಿಷಯ. ಇಬ್ಬರ ನಡುವೆ ಮನಸ್ತಾಪವಿರುವ ಕಾರಣದಿಂದಾಗಿಯೇ ಡೇವಿಡ್ ವಾರ್ನರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬೇಕಂತಲೇ ಕಡೆಗಣಿಸಿತು ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು.
ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗ ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಪಂದ್ಯಗಳಲ್ಲಿ ಸೋಲುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಲ್ಪಟ್ಟಿತು. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಡೇವಿಡ್ ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಅವರನ್ನು ನೂತನ ನಾಯಕನಾಗಿ ಟೂರ್ನಿಯ ಮಧ್ಯದಲ್ಲಿ ನೇಮಿಸಿತು.
ಹೀಗೆ ಟೂರ್ನಿ ಮಧ್ಯದಲ್ಲಿಯೇ ತಂಡದಿಂದ ಹೊರಬಿದ್ದಿದ್ದ ಡೇವಿಡ್ ವಾರ್ನರ್ ನಂತರದ ಪಂದ್ಯಗಳಲ್ಲಿಯೂ ಕೂಡ ಆಡುವ ಅವಕಾಶವನ್ನು ಪಡೆದುಕೊಳ್ಳದೇ ಸಂಪೂರ್ಣವಾಗಿ ಟೂರ್ನಿಯಿಂದಲೇ ಹೊರಬಿದ್ದರು. ಹಾಗೂ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಡೇವಿಡ್ ವಾರ್ನರ್ ಅವರಿಗೆ ತಂಡದ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಕೂಡ ನೀಡಲಿಲ್ಲ ಎಂಬ ಸುದ್ದಿ ಕೂಡ ಹಬ್ಬಿತ್ತು. ಹೀಗೆ ಡೇವಿಡ್ ವಾರ್ನರ್ ಅವರ ಕುರಿತು ಸನ್ ರೈಸರ್ಸ್ ಹೈದ್ರಾಬಾದ್ ನಡೆದುಕೊಂಡಿದ್ದ ರೀತಿಯ ಕುರಿತು ನೆಟ್ಟಿಗರು ಸನ್ ರೈಸರ್ಸ್ ಫ್ರಾಂಚೈಸಿ ಬಗ್ಗೆ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರ ಮೂಲಕ ನೆಟ್ಟಿಗರು ಡೇವಿಡ್ ವಾರ್ನರ್ ಅವರಿಗೆ ಬೆಂಬಲ ಸೂಚಿಸಿದ್ದರು. ಓರ್ವ ಹಿರಿಯ ಕ್ರಿಕೆಟಿಗನನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಡೇವಿಡ್ ವಾರ್ನರ್ ಪರ ನೆಟ್ಟಿಗರು ಬ್ಯಾಟ್ ಬೀಸಿದ್ದರು. ಹಾಗೂ ಡೇವಿಡ್ ವಾರ್ನರ್ ಅವರು ಬೇರೆ ತಂಡ ಸೇರಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ ಇದೀಗ ಅದೇ ನೆಟ್ಟಿಗರು ಡೇವಿಡ್ ವಾರ್ನರ್ ವಿರುದ್ಧವೇ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಡೇವಿಡ್ ವಾರ್ನರ್ ಇದೀಗ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕುರಿತು ಮಾಡಿರುವ ಕಾಮೆಂಟ್. ಹೌದು, ಅಭಿಮಾನಿಯೋರ್ವ ಮುಂಬರುವ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಹರಾಜಾಗುವ ಸಾಧ್ಯತೆ ಇದೆಯಾ ಎಂದು ವಾರ್ನರ್‌ಗೆ ಪ್ರಶ್ನೆ ಹಾಕಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ವಾರ್ನರ್ ಅನುಮಾನ ಎಂದು ಪ್ರತಿಕ್ರಿಯಿಸಿದ್ದಾರೆ.
ಹೀಗೆ ಸನ್ ರೈಸರ್ಸ್ ಹೈದರಾಬಾದ್ ಕುರಿತು ಡೇವಿಡ್ ವಾರ್ನರ್ ನೀಡಿರುವ ಪ್ರತಿಕ್ರಿಯೆ ಕುರಿತು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಫ್ರಾಂಚೈಸಿಯೊಂದು ತನ್ನನ್ನು ಉಳಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಫ್ರಾಂಚೈಸಿಯ ವಿರುದ್ಧ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.