"ಹಾಗೆ ಔಟಾದರೆ ಅದು ನಿಮ್ಮ ಪೆದ್ದುತನ": ಕ್ರಿಕೆಟ್ ನಿಯಮದ ಬದಲಾವಣೆಗೆ ವಾರ್ನರ್ ಬೆಂಬಲ

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಾನೂನುಗಳನ್ನು ಬದಲಾವಣೆ ಮಾಡುವ ಮರಿಲ್‌ಬೋನ್ ಕ್ರಿಕೆಟ್ ಕ್ಲಬ್ ಇತ್ತೀಚೆಗಷ್ಟೇ ಕ್ರಿಕೆಟ್‌ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು ಈ ಬದಲಾವಣೆ ಮುಂದಿನ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ನಿಯಮಗಳ ಬದಲಾವಣೆಯ ಬಗ್ಗೆ ಕ್ರಿಕೆಟ್ ಆಟಗಾರರು ಹಾಗೂ ಕ್ರಿಕೆಟ್ ಪ್ರೇಮಿಗಳು ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೂಡ ಈ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈ ಬದಲಾದ ನಿಯಮದಲ್ಲಿ ಪ್ರಮುಖವಾಗಿರುವ ಮಂಕಡಿಂಗನ್ನು ರನೌಟ್ ಎಂದು ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿರುವುದಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.
ಕೋವಿಡ್‌ಗಿಂತ ಹಿಂದೆ ಕ್ರಿಕೆಟ್ ಚೆಂಡಿನ ಹೊಳಪು ಹೆಚ್ಚಿಸಲು ಎಂಜಲನ್ನು ಬಳಸಲಾಗುತ್ತಿತ್ತು. ಆದರೆ ಕೋವಿಡ್‌ನ ನಂತರ ಎಂಜಲಿನ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ಕ್ರಿಕೆಟ್ ಚೆಂಡಿಗೆ ಎಂಜಲು ಬಳಸುವುದನ್ನು ಶಾಶ್ವತವಾಗಿ ನಿಷೇಧ ಮಾಡಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಎಂಸಿಸಿ ಬದಲಾವಣೆ ಮಾಡಿರುವ ಎರಡನೇ ನಿಯಮ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮಂಕಡಿಂಗ್. ಬೌಲರ್ ಬೌಲಿಂಗ್ ಮಾಡುವ ಮುನ್ನ ಬ್ಯಾಟರ್ ಕ್ರೀಸ್ ಬಿಟ್ಟು ಮುಂದೆ ಸಾಗಿದರೆ ಅದನ್ನು ಔಟ್ ಮಾಡುವುದನ್ನು ಎಂಸಿಸಿ ರನೌಟ್ ಎಂದು ಬದಲಾವಣೆ ಮಾಡಿಕೊಂಡಿದೆ. ಮೂರನೆಯದಾಗಿ ಕ್ಯಾಚ್ ನೀಡಿ ಔಟ್ ಆದ ಸಂದರ್ಭದಲ್ಲಿ ಬ್ಯಾಟರ್ ಕ್ರೀಸ್ ದಾಟಿದ್ದರೂ ಹೊಸ ಬ್ಯಾಟರ್ ಸ್ಟ್ರೈಕ್‌ನಲ್ಲಿಯೇ ಬ್ಯಾಟಿಂಗ್ ಮುಂದುವರಿಸಬೇಕು ಎಂಬ ಬದಲಾವಣೆಯನ್ನು ಎಂಸಿಸಿ ಮಾಡಿಕೊಂಡಿದೆ.

ಹಾಗೆ ಔಟಾದರೆ ಅದು ಆತನದ್ದೇ ತಪ್ಪು
ಇದರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಮಂಕಡಿಂಗ್ ಮೂಲಕ ಔಟ್ ಮಾಡುವುದನ್ನು ಕಾನೂನುಬದ್ಧವಾಗಿ ರನೌಟ್ ಎಂದು ಬದಲಾವಣೆ ಮಾಡಿರುವ ನಿಯಮಕ್ಕೆ ಅನೇಕ ಮಾಜಿ ಕ್ರಿಕೆಟಿಗರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಈ ನಿಯಮದ ಬದಲಾವಣೆಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬ್ರಾಡ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಆದರೆ ಡೇವಿಡ್ ವಾರ್ನರ್ ಬ್ಯಾಟರ್ ಈ ನಿಯಮದ ರೀತಿಯಲ್ಲಿ ರನೌಟ್ ಆದರೆ ಅದು ಆತನದ್ದೇ ತಪ್ಪು ಎಂದು ಹೇಳುವ ಮೂಲಕ ಎಂಸಿಸಿ ಬದಲಾವಣೆ ಮಾಡಿರುವ ನಿಯಮಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕ್ರೀಸ್‌ನಲ್ಲಿ ನಿಂತಿರಬೇಕು
"ನನ್ನ ಪ್ರಕಾರ ಈ ರೀತಿಯ ಸಂದರ್ಭಗಳು ಏಕದಿನ ಕ್ರಿಕೆಟ್ ಪಂದ್ಯದ ಅಂತಿಮ ಹಂತದಲ್ಲಿ ಅಥವಾ ಟಿ20 ಕ್ರಿಕೆಟ್‌ನಲ್ಲಿ ನಾವು ನೀಡಲು ಸಾಧ್ಯವಿದೆ. ಆದರೆ ಬ್ಯಾಟರ್ ಆಗಿ ನೀವು ಕ್ರೀಸ್‌ನಲ್ಲಿ ನಿಂತಿರಲೇಬೇಕು. ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಆ ರೀತಿ ರನೌಟ್ ಆದರೆ ಅದು ನಿಮ್ಮ ಪೆದ್ದುತನದಿಂದಲೇ ಆಗಿರುತ್ತೀರಿ, ಅದು ನಿಮ್ಮದೇ ತಪ್ಪು. ಬೌಲರ್ ಚೆಂಡೆಸೆಯುವ ಮುನ್ನ ಕ್ರೀಸ್ ಬಿಟ್ಟು ಮುಂದೆ ಹೋಗದಿರಿ ಎಂದು ನಿಮಗೆ ಹೇಳಲಾಗಿರುತ್ತದೆ. ಹಾಗಾಗಿ ನೀವು ಅದನ್ನು ಮಾಡಬಾರದು" ಎಂದು ಡೇವಿಡ್ ವಾರ್ನರ್ ಮಾಧ್ಯಮದವರ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕೂಡ ಬೆಂಬಲ
ಇನ್ನು ಸಚಿನ್ ತೆಂಡೂಲ್ಕರ್ ಕೂಡ ಕ್ರಿಕೆಟ್ ನಿಯಮದಲ್ಲಿನ ಬದಲಾವಣೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಈ ಬದಲಾವಣೆಗಳು ಕ್ರಿಕೆಟ್‌ಗೆ ಅಗತ್ಯವಾಗಿತ್ತು ಎಂಬರ್ಥದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಎಂಸಿಸಿ ಕಮಿಟಿ ಬದಲಾವಣೆ ಮಾಡಿರುವ ನೂತನ ಕ್ರಿಕೆಟ್ ನಿಯಮಗಳಿಗೆ ನಾನು ಬೆಂಬಲಿಸುತ್ತೇನೆ. ಮೊದಲನೆಯದಾಗಿ ಮಂಕಡಿಂಗ್ ವಿಚಾರ. ಮಂಕಡಿಂಗ್ ಎಂದು ಕರೆಯುವುದಕ್ಕೆ ನನಗೆ ಯಾವಾಗಲೂ ವಿರೋಧವಿದೆ. ಈಗ ಅದನ್ನು ರನೌಟ್ ಎಂದು ಬದಲಾವಣೆ ಮಾಡಿರುವುದಕ್ಕೆ ನಾನು ನಿಜಕ್ಕೂ ಸಂತಸವಾಗಿದೆ" ಎಂದು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಸಿದ್ದಾರೆ.

ಹೊಸ ನಿಯಮಗಳು ನ್ಯಾಯಯುತವಾಗಿದೆ
ಇನ್ನು ಕ್ಯಾಚ್ ನೀಡಿ ಔಟಾಗುವ ಸಂದರ್ಭದಲ್ಲಿ ಬ್ಯಾಟರ್‌ಗಳು ಸ್ಟ್ರೈಕ್ ಬದಲಾವಣೆ ಮಾಡಿಕೊಳ್ಳುವ ನಿಯಮದ ಬದಲಾವಣೆಗೂ ಸಚಿನ್ ಸಂತಸ ವ್ಯಕ್ತಪಡಿಸಿದ್ದಾರೆ. "ಈ ಹೊಸ ಬದಲಾವಣೆ ನಿಜಕ್ಕೂ ನ್ಯಾಯಯುತವಾಗಿದೆ, ಯಾಕೆಂದರೆ ಬೌಲರ್ ಓರ್ವ ಬ್ಯಾಟರ್‌ನನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದನೆಂದರೆ ಆತ ಹೊಸ ಬ್ಯಾಟರ್‌ಗೆ ಬೌಲಿಂಗ್ ಮಾಡಲು ದೊರೆತರೆ ಆ ಬೌಲರ್‌ಗೆ ನ್ಯಾಯ ಸಿಗುತ್ತದೆ. ಈ ಹೊಸ ನಿಯಮ ಉತ್ತಮವಾಗಿದ್ದು ಈ ಬದಲಾವಣೆಗಾಗಿ ನಾನು ಬೆಂಬಲ ನೀಡುತ್ತೇನೆ" ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications