IPL 2024: ಸಿಎಸ್‌ಕೆ ವಿರುದ್ಧ ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್‌ಗೆ ಭಾರೀ ದಂಡ!
ಭಾನುವಾರ, ಮಾರ್ಚ್ 31ರಂದು ವಿಶಾಖಪಟ್ಟಣದಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ನಾಯಕ ರಿಷಭ್ ಪಂತ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಹಣಾಹಣಿಯಲ್ಲಿ 20 ರನ್‌ಗಳಿಂದ ಸಿಎಸ್‌ಕೆ ತಂಡವನ್ನು ಸೋಲಿಸಿತು. ಸಿಎಸ್‌ಕೆ ತಂಡಕ್ಕಾಗಿ 192 ರನ್‌ಗಳನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಎಂಎಸ್ ಧೋನಿ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದ್ದು, ಇದಕ್ಕೂ ಮುನ್ನ ರಿಷಭ್ ಪಂತ್ 32 ಎಸೆತಗಳಲ್ಲಿ 51 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದು ಪಂದ್ಯದ ಮುಖ್ಯಾಂಶವಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಅವರ ಅಪರಾಧವನ್ನು ಪ್ರಕಟಿಸುವ ಹೇಳಿಕೆಯನ್ನು ಐಪಿಎಲ್ ಮಂಡಳಿ ನೀಡಿತು. ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಅಪರಾಧವಾಗಿರುವುದರಿಂದ ನಾಯಕನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
"ಮಾರ್ಚ್ 31ರಂದು ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ಅವರಿಗೆ ದಂಡ ವಿಧಿಸಲಾಗಿದೆ," ಎಂದು ಐಪಿಎಲ್‌ನ ಹೇಳಿಕೆ ತಿಳಿಸಿದೆ.
"ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ದರದ ಅಪರಾಧಗಳಿಗೆ ಸಂಬಂಧಿಸಿದಂತೆ ತಂಡದ ಮೊದಲ ಅಪರಾಧವಾಗಿದೆ. ಹೀಗಾಗಿ ನಾಯಕ ರಿಷಭ್ ಪಂತ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು," ಎಂದು ಐಪಿಎಲ್ ಹೇಳಿದೆ.

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಡೇವಿಡ್ ವಾರ್ನರ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 52 ರನ್, ಐಪಿಎಲ್‌ಗೆ ಪುನರಾಗಮನ ಮಾಡಿದ ಪೃಥ್ವಿ ಶಾ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 43 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 93 ರನ್‌ಗಳ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದರು.
ಆ ಬಳಿಕ ನಾಯಕ ರಿಷಭ್ ಪಂತ್ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 51 ರನ್ ಬಾರಿಸಿ ಕೊನೆಯಲ್ಲಿ ಕೆಲವು ಅದ್ಭುತ ಶಾಟ್‌ಗಳೊಂದಿಗೆ ಸ್ಕೋರ್ ಬೋರ್ಡ್‌ನಲ್ಲಿ ಮೊತ್ತ ಹೆಚ್ಚಿಸಿದರು. ಮಥೀಶ್ ಪತಿರಾಣ 31 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ತಂಡದ ಪರ ಅತ್ಯುತ್ತಮ ಬೌಲರ್ ಎನಿಸಿದರು.
192 ರನ್ ಚೇಸ್‌ನಲ್ಲಿ ಖಲೀಲ್ ಅಹ್ಮದ್ (2/21) ಮತ್ತು ಮುಖೇಶ್ ಕುಮಾರ್ (3/21) ತಮ್ಮ ಲೈನ್ ಮತ್ತು ಲೆಂಗ್ತ್ ಬೌಲಿಂಗ್‌ನಿಂದ ಸಿಎಸ್‌ಕೆ ಬ್ಯಾಟರ್‌ಗಳಿಗೆ ತೊಂದರೆ ನೀಡಿದರು. ಒಂದು ಹಂತದಲ್ಲಿ ಸಿಎಸ್‌ಕೆ ತಂಡ 10.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತ್ತು.
ಈ ವೇಳೆ ಅಜಿಂಕ್ಯ ರಹಾನೆ 30 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 45 ರನ್, ಡೇರಿಲ್ ಮಿಚೆಲ್ 26 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 34 ರನ್‌ಗಳ ಉಪಯುಕ್ತ ಪ್ರದರ್ಶನಗಳು ಬಂದವು.
ಅಂತಿಮವಾಗಿ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 ರನ್‌ಗಳಿಗೆ ನಿರ್ಬಂಧಗೊಂಡಿತು ಮತ್ತು 20 ರನ್‌ಗಳಿಂದ ಸೋಲು ಅನುಭವಿಸಿತು. ಖಲೀಲ್ ಅಹ್ಮದ್ ಅವರ ಪಂದ್ಯ ವಿಜೇತ ಬೌಲಿಂಗ್ ಸ್ಪೆಲ್‌ಗಾಗಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು.
ಸಿಎಸ್‌ಕೆ ತಂಡ ಎರಡು ಗೆಲುವು ಮತ್ತು ಒಂದು ಸೋಲಿಗಳಿಂದ ನಾಲ್ಕು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಟಿಲ್ಸ್ ಒಂದು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications