ಸಂಘಟಿತ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ 17ನೇ ಆವೃತ್ತಿಯ ಐಪಿಎಲ್‌ನ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ರನ್‌ಗಳಿಂದ ಮಣಿಸಿ, ಪ್ರಸಕ್ತ ಲೀಗ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 ರನ್ ಸೇರಿಸಿ ಸೋಲು ಕಂಡಿತು. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು.

ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಜವಾಬ್ದಾರಿಯನ್ನು ಮರೆತರು. ಆರಂಭಿಕರನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಖಲೀಲ್ ಅಹ್ಮದ್ ಸಫಲರಾದರು.
ಮೂರನೇ ವಿಕೆಟ್‌ಗೆ ಅನುಭವಿ ಅಜಿಂಕ್ಯ ರಹಾನೆ ಹಾಗೂ ಡೇರಿಲ್ ಮಿಚೆಲ್ ಜೋಡಿ ಎದುರಾಳಿ ಬೌಲರ್‌ಗಳನ್ನು ಕಾಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಪಂತ್ ಮಾಡಿಕೊಂಡ ಪ್ಲ್ಯಾನ್ ಎಲ್ಲ ಉಲ್ಟಾ ಹೊಡೆಯಿತು. ಈ ಜೋಡಿ 45 ಎಸೆತಗಳಲ್ಲಿ 68 ರನ್ ಸೇರಿಸಿತು. ಡೇರಿಲ್ ಮಿಚೆಲ್ 1 ಬೌಂಡರಿ, 2 ಸಿಕ್ಸರ್ ನೆರವಿನಿಂದ 34 ರನ್ ಸಿಡಿಸಿದರು. ಭರವಸೆಯ ಆಟಗಾರ ಅಜಿಂಕ್ಯ ರಹಾನೆ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟ್ ಆದರು.

ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಶಿವಂ ದುಬೆ (18), ಸಮಿರ್ ರಜ್ವಿ (0) ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆಲ್‌ರೌಂಡರ್ ರವೀಂದ್ರ ಜಡೇಜಾ ಅಜೇಯ 21 ರನ್ ಸಿಡಿಸಿದರು. ಮಹೇಂದ್ರ ಸಿಂಗ್ ಧೋನಿ ತಮ್ಮ ಹಳೆಯ ಖದರ್‌ನಲ್ಲಿ ಬ್ಯಾಟ್ ಮಾಡಿದರು. ಕೇವಲ 16 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ 3, ಖಲೀಲ್ ಅಹ್ಮದ್ 2 ವಿಕೆಟ್ ಪಡೆದು ಗೆಲುವಿನಲ್ಲಿ ಮಿಂಚಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಸೊಗಸಾಗಿತ್ತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಜೋಡಿ, ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 93 ರನ್ ಸೇರಿಸಿತು.

ಡೇವಿಡ್ ವಾರ್ನರ್ 35 ಎಸೆತಗಳಲ್ಲಿ 52 ರನ್ ಸಿಡಿಸಿದರು. ಇವರ ಇನಿಂಗ್ಸ್‌ನಲ್ಲಿ 5 ಬೌಂಡರಿ, 3 ಸಿಕ್ಸರ್ ಸೇರಿವೆ. ಪೃಥ್ವಿ ಶಾ 27 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 43 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಿಚ್ ಮಾರ್ಷ್ (18), ಟ್ರಿಸ್ಟಿಯನ್ ಸ್ಟಬ್ಸ್ (0) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅಲ್ಲದೆ ಐಪಿಎಲ್‌ನಲ್ಲಿ ಉಳಿದ ಪಂದ್ಯಗಳಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದರು. ಇವರು 32 ಎಸೆತಗಳಲ್ಲಿ 51 ರನ್ ಬಾರಿಸಿ ಔಟ್ ಆದರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿವೆ.
ಅಕ್ಷರ್ ಪಟೇಲ್ ಅಜೇಯ 7, ಅಭಿಷೇಕ್ ಪೋರೆಲ್ ಅಜೇಯ 9 ರನ್ ಸಿಡಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್ ಸೇರಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಮತೀಶ್ ಪತಿರಾಣಾ 4 ಓವರ್ ಬೌಲಿಂಗ್ ಮಾಡಿ 31 ರನ್ ನೀಡಿ ಮೂರು ವಿಕೆಟ್ ಪಡೆದರು. ಉಳಿದಂತೆ ಮುಷ್ತಾಫಿಜುರ್ ರೆಹಮನಾ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.