DC vs GT: ಕ್ಯಾಪಿಟಲ್ಸ್ ವಿರುದ್ಧ ಟೈಟಾನ್ಸ್‌ಗೆ ರೋಚಕ ಜಯ: ರಾಹುಲ್ ಏಕಾಂಗಿ ಹೋರಾಟ
ನವದೆಹಲಿ: ಕೊನೆಯ ಎಸೆತದ ವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಜಯ ಸಾಧಿಸಿದೆ. ಕೊನೆಯ ವರೆಗೂ ಹೋರಾಟ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿದೆ. ಈ ಮೂಲಕ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಗೆಲುವಿನ ಕನಸಿಗೆ ಬ್ರೇಕ್ ಬಿದ್ದಿದೆ. ಇನ್ನು ಟೈಟಾನ್ಸ್ ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾಗಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಮೊದಲ ಗೆಲುವಿನ ನಗೆ ಬೀರಿದೆ.
ಕೊನೆಯ ಎರಡು ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 36 ರನ್ ಅವಶ್ಯಕತೆ ಇತ್ತು. 19ನೇ ಓವರ್‌ನ್ನು ಟೈಟಾನ್ಸ್ ಪರ ಮೊಹಮ್ಮದ್ ಸಿರಾಜ್ ಬೌಲ್ ಮಾಡಿದರು. ಈ ಓವರ್‌ನಲ್ಲಿ ಡೆಲ್ಲಿ ತಂಡದ ಡೇವಿಡ್ ಮಿಲ್ಲರ್ 23 ರನ್ ಬಾರಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಕೊನೆಯ ಓವರ್‌ನಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಪ್ರಸಿದ್ಧ್ ಕೃಷ್ಣ ಬಿಗುವಿನ ದಾಳಿ ನಡೆಸಿ ತಂಡ 1 ರನ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ಸವಾಲಿನ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪತುಮ್ ನಿಸ್ಸಂಕಾ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದಂತೆ 63 ರನ್ ಸೇರಿಸಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಪತುಮ್ ನಿಸ್ಸಂಕಾ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 41 ರನ್ ಬಾರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 8.1 ಓವರ್‌ಗಳಲ್ಲಿ 76 ರನ್ ಸೇರಿಸಿತು.
ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ (5), ಕಳೆದ ಎರಡು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದ ಸಮೀರ್ ರಿಜ್ವಿ, ರಶೀದ್ ಖಾನ್ ಅವರ ಮೊದಲ ಎಸೆತದಲ್ಲಿ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು. ನಾಯಕ ಅಕ್ಷರ್ ಪಟೇಲ್ (2), ಟ್ರಿಸ್ಟನ್ ಸ್ಬಬ್ಸ್ (7) ಜವಾಬ್ದಾರಿಯನ್ನು ಮರೆತರು.
ರಾಹುಲ್ 92
ಮೊದಲ ಎರಡು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಕರ್ನಾಟಕದ ಕೆಎಲ್ ರಾಹುಲ್ 92 ಬಾರಿಸಿ ಅಬ್ಬರಿಸಿದರು. ಇವರು 52 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಬಾರಿಸಿ ಆರ್ಭಟಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ಮಿಲ್ಲರ್ ಭರ್ಜರಿ ಆಟವನ್ನು ನೀಡಿದರು. ಇವರು 20 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 41 ರನ್ ಸಿಡಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್ ಸೇರಿಸಿ ಸೋಲು ಕಂಡಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಸಾಯಿ ಸುದರ್ಶನ್ (12) ಜವಾಬ್ದಾರಿ ಮರೆತರು. ತಂಡದ ಮೊತ್ತ 19 ಆಗಿದ್ದಾಗ ಸಾಯಿ ಔಟ್ ಆದರು. ಎರಡನೇ ವಿಕೆಟ್‌ಗೆ ನಾಯಕ ಶುಭಮನ್ ಗಿಲ್ ಅವರನ್ನು ಸೇರಿಕೊಂಡ ಜೋಸ್ ಬಟ್ಲರ್ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಬಟ್ಲರ್ ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಸ್ಫೋಟಕ ಬ್ಯಾಟಿಂಗ್ ನಡೆಸಿ 52 ರನ್ ಸಿಡಿಸಿದರು. ಎರಡನೇ ವಿಕೆಟ್‌ಗೆ ಗಿಲ್ ಹಾಗೂ ಬಟ್ಲರ್ ಜೋಡಿ 32 ಎಸೆತಗಳಲ್ಲಿ 60 ರನ್ ಸೇರಿಸಿತು.
ಸವಾಲಿನ ಮೊತ್ತ ಕಲೆ ಹಾಕಿದ ಟೈಟಾನ್ಸ್
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಗಿಲ್ ಅವರಿಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 61 ಎಸೆತಗಳಲ್ಲಿ 104 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಶುಭಮನ್ ಗಿಲ್ 45 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ, ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದರು.
ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 210 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications