ಬುಧವಾರ, ಏಪ್ರಿಲ್ 24ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 40ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು.
ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2024ರಲ್ಲಿ ಆಡಿದ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲು 8 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಗುಜರಾತ್ ಟೈಟನ್ಸ್ ಕೂಡ ಆಡಿದ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲು 8 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಇಳಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಕ್ಷರ್ ಪಟೇಲ್ ಮತ್ತು ನಾಯಕ ರಿಷಭ್ ಪಂತ್ ಅವರ ಭರ್ಜರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು.
225 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ವೃದ್ಧಿಮಾನ್ ಸಹಾ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕದ ಹೊರತಾಗಿಯೂ, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 220 ರನ್‌ಗಳು ಮಾತ್ರ ಗಳಿಸಿತು ಮತ್ತು 4 ರನ್‌ಗಳ ಅಂತರದಿಂದ ರೋಚಕ ಸೋಲು ಅನುಭವಿಸಿತು.
ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ವೃದ್ಧಿಮಾನ್ ಸಹಾ ಮತ್ತು ನಾಯಕ ಶುಭ್ಮನ್ ಗಿಲ್ ದೊಡ್ಡ ಆರಂಭ ನೀಡಲು ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ 1.3 ಓವರ್‌ನಲ್ಲಿ ಕೇವಲ 13 ರನ್ ಗಳಿಸಿತು. ಈ ವೇಳೆ 6 ರನ್ ಗಳಿಸಿ ಆಡುತ್ತಿದ್ದ ಶುಭ್ಮನ್ ಗಿಲ್ ಔಟಾದರು.

ನಂತರ ಬಂದ ಸಾಯಿ ಸುದರ್ಶನ್ ಗುಜರಾತ್ ಟೈಟನ್ಸ್ ತಂಡದ ಮೊತ್ತ ಹೆಚ್ಚಿಸಲು ನೋಡಿದರು ಮತ್ತು ವೃದ್ಧಿಮಾನ್ ಸಹಾ ಜೊತೆಗೂಡಿ 2ನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನಿರ್ಮಿಸಿದರು. ಆಗ 25 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಅಜ್ಮತುಲ್ಲಾ ಒಮರ್ಜಾಯ್ 1 ರನ್ ಗಳಿಸಿ ಔಟಾದರೆ, ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಗುಜರಾತ್ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಕೇವಲ 23 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 55 ರನ್ ಬಾರಿಸಿ ಔಟಾದರು.
ನಂತರ ಕ್ರೀಸ್‌ಗೆ ಬಂದ ಶಾರೂಖ್ ಖಾನ್ 8 ರನ್, ರಾಹುಲ್ ತೇವಾಟಿಯಾ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ರಶೀದ್ ಖಾನ್ 21 ರನ್ ಮತ್ತು ರವಿಶ್ರೀನಿವಾಸನ್ ಸಾಯಿಕಿಶೋರ್ 13 ರನ್ ಗಳಿಸಿದರು ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಇನ್ನು ಬೌಲಿಂಗ್‌ನಲ್ಲಿ ರಸಿಖ್ ದಾರ್ ಸಲಾಮ್ 4 ಓವರ್‌ಗಳಲ್ಲಿ 44 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅನ್ರಿಚ್ ನಾರ್ಟ್ಜೆ, ಮುಕೇಶ್ ಕುಮಾರ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 35 ರನ್‌ಗಳ ಜೊತೆಯಾಟ ನೀಡಿದರು.
ಈ ವೇಳೆ ಪೃಥ್ವಿ ಶಾ 11 ರನ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 23 ರನ್ ಗಳಿಸಿ ಒಬ್ಬರ ಹಿಂದೆ ಒಬ್ಬರು ಔಟಾದರು. ನಂತರ ಬಂದ ಶಾಯ್ ಹೋಪ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆಗ ಜೊತೆಗೂಡಿದ ಅಕ್ಷರ್ ಪಟೇಲ್ ಮತ್ತು ನಾಯಕ ರಿಷಭ್ ಪಂತ್ ಕುಸಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನಿರ್ಮಿಸಿತು.
ಆಲ್‌ರೌಂಡರ್ ಅಕ್ಷರ್ ಪಟೇಲ್ 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 66 ರನ್ ಗಳಿಸಿದರು ಮತ್ತು ಐಪಿಎಲ್‌ನಲ್ಲಿ ಎರಡನೇ ಅರ್ಧಶತಕ ಬಾರಿಸಿದರು.
ನಾಯಕ ರಿಷಭ್ ಪಂತ್ ತಮ್ಮ ಹಳೆಯ ಟಿ20 ಆಟಕ್ಕೆ ಮರಳಿದರು. ಕೇವಲ 43 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 88 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 7 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ ಅಜೇಯ 26 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಸಂದೀಪ್ ವಾರಿಯರ್ 3 ಓವರ್‌ಗಳಲ್ಲಿ 15 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ನೂರ್ ಅಹ್ಮದ್ 3 ಓವರ್‌ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಪಡೆದರು. ಇನ್ನು ಮೋಹಿತ್ ಶರ್ಮಾ ತಮ್ಮ 4 ಓವರ್‌ಗಳ ಕೋಟಾದಲ್ಲಿ 73 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿದರು.