ಭರವಸೆಯ ಆಟಗಾರ ಕ್ವಿಂಟನ್ ಡಿಕಾಕ್ ಅವರು ಬಾರಿಸಿದ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 271 ರನ್‌ಗಳ ಗುರಿಯನ್ನು ನೀಡಿದೆ. ವಿಶಾಖಪಟ್ಟಣಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ. ಈ ಮೂಲಕ ಭಾರತ ತಂಡಕ್ಕೆ ಸರಣಿ ಗೆಲುವಿಗೆ ಉತ್ತಮ ಮೊತ್ತದ ಟಾರ್ಗೆಟ್ ನೀಡಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ರಿಯಾನ್ ರಿಕಲ್ಟನ್ (0) ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ತೆಂಬು ಬವುಮಾ ಅವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್‌ಗಳು ವಿಫಲರಾದರು. ಈ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾದರು. 2ನೇ ವಿಕೆಟ್‌ಗೆ ಬವುಮಾ ಹಾಗೂ ಡಿಕಾಕ್ ಜೋಡಿ 121 ಎಸೆತಗಳಲ್ಲಿ 113 ರನ್ ಸೇರಿಸಿತು. ಈ ವೇಳೆ ತೆಂಬು ಬವುಮಾ 5 ಬೌಂಡರಿ ನೆರವಿನಿಂದ 48 ರನ್ ಬಾರಿಸಿ ಔಟ್ ಆದರು.

ಮ್ಯಾಥ್ಯೂ ಬ್ರೀಟ್ಜ್ಕೆ ಹಾಗೂ ಕ್ವಿಂಟನ್ ಡಿಕಾಕ್ ಸಹ ತಂಡಕ್ಕೆ ಅರ್ಧಶತಕ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ವೇಳೆ ಮ್ಯಾಥ್ಯೂ ಬ್ರೀಟ್ಜ್ಕೆ 24 ರನ್ ಬಾರಿಸಿ ಔಟ್ ಆದರು. ಏಡನ್ ಮಾರ್ಕ್ರಮ್ (1) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು.
ಆರಂಭಿಕರಾಗಿ ಕಣಕ್ಕೆ ಇಳಿದ ಕ್ವಿಂಟನ್ ಡಿಕಾಕ್ ಟೀಮ್ ಇಂಡಿಯಾದ ಬೌಲರ್‌ಗಳ ಸವಾಲನ್ನು ಮೀರಿನಿಂತರು. ಇವರು 86 ಎಸೆತಗಳಲ್ಲಿ 6 ಸಿಕ್ಸರ್ 8 ಬೌಂಡರಿ ಸಹಾಯದಿಂದ 106 ರನ್ ಬಾರಿಸಿ ಅಬ್ಬರಿಸಿದರು. ಇವರ ಅಮೋಘ ಶತಕದ ಪರಿಣಾಮ ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಕೇಶವ್ ಮಹಾರಾಜ್ 20 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ದಕ್ಷಿಣ ಆಪ್ರಿಕಾ 47.5 ಓವರ್‌ಗಳಲ್ಲಿ 270 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರು. ಇವರು ಆರಂಭದಿಂದಲೂ ರನ್‌ಗಳನ್ನು ನೀಡದಂತೆ ತಡೆಯುವಲ್ಲಿ ಸಫಲರಾದರು. ಕಳೆದ ಪಂದ್ಯದಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದ ಪ್ರಸಿದ್ಧ ಕೃಷ್ಣ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ನಡೆಸಿದರು. ಇವರು 9.5 ಓವರ್ ಬೌಲಿಂಗ್ ಮಾಡಿ 66 ರನ್ ನೀಡಿ 4 ವಿಕೆಟ್ ಕಬಳಿಸಿದರು. ಕುಲ್‌ದೀಪ್ ಯಾದವ್ ಸಹ ಬಿಗುವಿನ ದಾಳಿ ನಡೆಸಿ ಮಿಂಚಿದರು. ಇವರು 10 ಓವರ್ ಬೌಲಿಂಗ್ ಮಾಡಿ 41 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಮೂರನೇ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯವಾಗಿದೆ. ಯಾವ ತಂಡ ಈ ಪಂದ್ಯವನ್ನು ಗೆಲ್ಲುತ್ತದೋ ಆ ತಂಡ ಸರಣಿ ಗೆಲುವಿನ ನಗೆ ಬೀರಲಿದೆ.