5 ಪಂದ್ಯದಲ್ಲಿ 288 ರನ್ ಚಚ್ಚಿರುವ ಈತನಿಂದ ಕೊಹ್ಲಿ ಸ್ಥಾನಕ್ಕೆ ಕುತ್ತು: ಈತನೇ ಕೊಹ್ಲಿಯ ಬದಲಿ ಆಟಗಾರ!

ವಿರಾಟ್ ಕೊಹ್ಲಿ ಕೊನೆಯದಾಗಿ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿ ಎರಡೂವರೆ ವರ್ಷಗಳೇ ಕಳೆದಿವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಅರ್ಧಶತಕ ಗಳಿಸಲು ಕೂಡಾ ಪರದಾಡುತ್ತಿದ್ದು, ನಾಯಕತ್ವದ ಜವಾಬ್ದಾರಿಯನ್ನು ಕಳೆದುಕೊಂಡ ನಂತರವೂ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಏಕದಿನ, ಟೆಸ್ಟ್ ಹಾಗೂ ಟಿ ಟ್ವೆಂಟಿ ಎಲ್ಲಾ ಮಾದರಿಯಲ್ಲೂ ವಿರಾಟ್ ಕೊಹ್ಲಿ ಈ ಹಿಂದೆ ತಾವು ನೀಡುತ್ತಿದ್ದ ರೀತಿಯ ಪ್ರದರ್ಶನ ನೀಡುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ. ಹೀಗಾಗಿಯೇ ಇದೀಗ ಟೀಮ್ ಇಂಡಿಯಾ ಆಯ್ಕೆಗಾರರ ಸಮಿತಿ ಮಾಜಿ ನಾಯಕನನ್ನು ತಂಡದಿಂದ ಕೈಬಿಟ್ಟು ಬದಲಿ ಆಟಗಾರನನ್ನು ಹುಡುಕುವ ಯತ್ನದಲ್ಲಿದೆ ಎಂಬ ವಿಷಯವನ್ನು ವರದಿಯೊಂದು ಇತ್ತೀಚೆಗಷ್ಟೇ ತಿಳಿಸಿತ್ತು.
ಹೌದು, ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಕಮ್ ಬ್ಯಾಕ್ ಮಾಡದೇ ಇದ್ದರೆ ಮುಂಬರುವ ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಕೈತಪ್ಪಿಸಿಕೊಳ್ಳುವುದು ಖಚಿತ ಎಂಬ ಬೃಹತ್ ಸುದ್ದಿ ಕಳೆದೆರಡು ದಿನಗಳಿಂದ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಇನ್ನು ವಿರಾಟ್ ಕೊಹ್ಲಿ ರೀತಿಯ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟರೆ ಅವರ ಸ್ಥಾನದಲ್ಲಿ ಯಾವ ಆಟಗಾರ ಕಣಕ್ಕಿಳಿಯಬಹುದು ಎಂಬ ಚರ್ಚೆಗಳು ಶುರುವಾದವು. ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯ ಮುಗಿಸಿದ್ದು, ಈ ಪಂದ್ಯ ಮುಗಿದ ನಂತರ ಕೊಹ್ಲಿ ಬದಲಿ ಆಟಗಾರನಾಗಿ ಯಾರು ಮುಂದಿನ ಪ್ರತಿಷ್ಠಿತ ಟೂರ್ನಿಗಳಲ್ಲಿ ಕಣಕ್ಕಿಳಿಯಬಹುದು ಎಂಬ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಕ್ಕಂತಾಗಿದೆ. ತಾನಾಡಿದ ಕಳೆದ 5 ಪಂದ್ಯಗಳಲ್ಲಿ ಅಬ್ಬರಿಸಿರುವ ಈತನ ಪ್ರದರ್ಶನ ತಂಡದಲ್ಲಿ ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ಹೂಡಾ
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ 17 ಎಸೆತದಲ್ಲಿ 33 ರನ್ ಕಲೆಹಾಕಿ 3 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಹೀಗೆ ದೀಪಕ್ ಹೂಡಾ ಈ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ತನ್ನ ಸತತ ಐದನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ ಹಾಗೂ ವಿರಾಟ್ ಕೊಹ್ಲಿಯ ಸ್ಥಾನವನ್ನು ತಂಡದಲ್ಲಿ ಆಕ್ರಮಿಸಿಕೊಳ್ಳಬಲ್ಲ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಕಳೆದ 5 ಪಂದ್ಯಗಳಲ್ಲಿಯೂ ಸತತ ಅಬ್ಬರ
ಕೇವಲ ಇಂಗ್ಲೆಂಡ್ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯ ಮಾತ್ರವಲ್ಲ, ಈ ಪಂದ್ಯವೂ ಸೇರಿದಂತೆ ದೀಪಕ್ ಹೂಡಾ ಆಡಿರುವ ತನ್ನ ಕೊನೆಯ 5 ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಮಿಂಚಿದ್ದಾರೆ. ದೀಪಕ್ ಹೂಡಾ ಕೊನೆಯ 5 ಪಂದ್ಯಗಳಲ್ಲಿ ಕಲೆಹಾಕಿರುವ ರನ್ ವಿವರ ಹೀಗಿದೆ: 45(26), 47*(29), 104(57), 59(37) ಮತ್ತು 33(17).
ಹೀಗೆ ದೀಪಕ್ ಹೂಡಾ ಆಡಿರುವ ಕೊನೆಯ 5 ಪಂದ್ಯಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಅದರಲ್ಲಿಯೂ ಐರ್ಲೆಂಡ್ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 57 ಎಸೆತಗಳಲ್ಲಿ ಅಬ್ಬರದ 104 ರನ್ ಗಳಿಸಿ ಶತಕ ಬಾರಿಸಿದ್ದರು. ದೀಪಕ್ ಹೂಡಾ ಸಾಲು ಸಾಲು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಭರವಸೆ ಮೂಡಿಸಿದ್ದು, ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರ ಎಂಬ ಮಾತುಗಳು ಹರಿದಾಡುತ್ತಿವೆ.

ಅಲುಗಾಡುತ್ತಿದೆ ಕೊಹ್ಲಿ ಸ್ಥಾನ
ಸದ್ಯ ದೀಪಕ್ ಹೂಡಾ ಉತ್ತಮ ಪ್ರದರ್ಶನದಿಂದ ಕೊಹ್ಲಿ ಸ್ಥಾನ ಅಲುಗಾಡುತ್ತಿದೆ. ಮುಂಬರುವ ತಿಂಗಳು ಶ್ರೀಲಂಕಾದಲ್ಲಿ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ನಡೆಯುವುದರಿಂದ ಅದಕ್ಕೂ ಮುನ್ನ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications