

ನೇಪಿಯರ್, ಜನವರಿ 23: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ನೇಪಿಯರ್ ನ ಮೆಕ್‌ಲೀನ್ ಪಾರ್ಕ್‌ನಲ್ಲಿ ನಡೆದ ಭಾರತ-ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಏಕದಿನ 5,000 ರನ್ ಪೂರೈಸಿಕೊಂಡಿದ್ದಾರೆ.
ಬುಧವಾರ (ಜನವರಿ 23) ನಡೆದ ಇತ್ತಂಡಗಳ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವ್ 5000 ರನ್ ಸಾಧನೆ ಮೆರೆದಿದ್ದಷ್ಟೇ ಅಲ್ಲ, ಅತೀ ವೇಗವಾಗಿ 5 ಸಾವಿರ ರನ್ ಗಡಿ ದಾಟಿದ ವಿಶ್ವದ 4ನೇ ಬ್ಯಾಟ್ಸ್ಮನ್ ಹೆಗ್ಗಳಿಕೆಗೂ ಪಾತ್ರರಾದರು.
ಧವನ್ ವೇಗದ 5,000 ರನ್ ಸಾಧನೆ, ಟ್ರಿನಿಡಾಡ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆಯನ್ನು ಸರಿದೂಗಿಸಿಕೊಂಡಿದೆ. ಅಲ್ಲದೆ ಭಾರತದ ಸೌರವ್ ಗಂಗೂಲಿ ಮತ್ತು ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ದಾಖಲೆಯನ್ನು ಮೀರಿಸಿದೆ.
ಶಿಖರ್ ಧವನ್ 118 ಇನ್ನಿಂಗ್ಸ್‌ಗಳಲ್ಲಿ 5019 ರನ್ (ಪಂದ್ಯದಲ್ಲಿ 9ನೇ ಓವರ್ ಮುಕ್ತಾಯದ ವೇಳೆಗೆ) ಸಾಧನೆ ಮಾಡಿದ್ದರೆ, ಸೌತ್ ಆಫ್ರಿಕಾದ ಹಾಶಿಮ್ ಆಮ್ಲಾ 101 ಇನ್ನಿಂಗ್ಸ್ ಗಳಲ್ಲಿ 5000 ರನ್ ಪೂರೈಸುವ ಮೂಲಕ ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ದೈತ್ಯ ವಿವಿಯನ್ ರಿಚರ್ಡ್ಸ್ 114 ಇನ್ನಿಂಗ್ಸ್‌ಗಳಲ್ಲಿ ಇದೇ ದಾಖಲೆಯನ್ನು ತನ್ನ ಹೆಸರಿನಲ್ಲಿ ಉಳಿಸಿಕೊಂಡು ದ್ವಿತೀಯ ಸ್ಥಾನದಲ್ಲಿದ್ದಾರೆ.