
ಹೊಸದಿಲ್ಲಿ. ಮೇ 16: ಭಾರತಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಎಂ.ಎಸ್ ಧೋನಿ, ಟೀಮ್ ಇಂಡಿಯಾದಲ್ಲಿ ಶಿಸ್ತು ಕಾಯ್ದುಕೊಳ್ಳಲು ಹೊಸ ಆಲೋಚನೆಗಳನ್ನು ತರುತ್ತಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಮಾನಸಿಕ ಸ್ಥಿತಿ ಸುಧಾರಣೆಯ ತರಬೇತುದಾರ (ಮೆಂಟಲ್ ಕಂಡೀಷನಿಂಗ್ ಕೋಚ್) ಪ್ಯಾಡಿ ಅಪ್ಟನ್ ಹೇಳಿದ್ದಾರೆ.
ತಮ್ಮ ನೂತನ ಮುಸ್ತಕ 'ದಿ ಬೇರ್‌ಫೂಟ್ ಕೋಚ್' ಕುರಿತಾಗಿ ಮಾಧ್ಯಮದೊಟ್ಟಿಗೆ ಮಾತನಾಡಿದ ಪ್ಯಾಡಿ ಅಪ್ಟನ್, ಆಟಗಾರರು ಅಭ್ಯಾಸಕ್ಕೆ ಮತ್ತು ತಂಡ ಮೀಟಿಂಗ್‌ಗಳಿಗೆ ತಡವಾಗಿ ಬರುವುದನ್ನು ತಪ್ಪಿಸುವ ಸಲುವಾಗಿ ಧೋನಿ ಹೊಸ ಆಲೋಚನೆಗಳನ್ನು ಮಾಡುತ್ತಿದ್ದರು ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
"ನಾನು ಟೀಮ್ ಇಂಡಿಯಾಗೆ ಸೇರಿದ ದಿನದಲ್ಲಿ ಟೆಸ್ಟ್ ತಂಡಕ್ಕೆ ಅನಿಲ್ ಕುಂಬ್ಳೆ ಮತ್ತು ಏಕದಿನ ಕ್ರಿಕೆಟ್ ತಂಡಕ್ಕೆ ಎಂ.ಎಸ್ ಧೋನಿ ನಾಯಕರಾಗಿದ್ದರು. ನಮ್ಮದು ಬಹುತೇಕ ಸ್ವಯಂ ಆಡಳಿತ ಪ್ರಕ್ರಿಯೆಯಾಗಿತ್ತು. ಹೀಗಾಗಿ ತಂಡದ ಮೀಟಿಂಗ್ ಮತ್ತು ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಪ್ರಮುಖವೇ? ಎಂದು ತಂಡವನ್ನು ಪ್ರಶ್ನಿಸಿದಾಗ ಎಲ್ಲರೂ ಹೌದು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ತಡವಾಗಿ ಬಂದ ಆಟಗಾರ 10 ಸಾವಿರ ರೂ. ದಂಡ ತೆರಬೇಕು ಎಂದು ಸಲಹೆ ನೀಡಿದ್ದರು. ಆದರೆ, ಧೋನಿ ಇದಕ್ಕಿಂತಲೂ ಕಠೋರವಾಗಿ ಒಬ್ಬ ಆಟಗಾರ ತಡವಾಗಿ ಬಂದರೆ ತಂಡದ ಪ್ರತಿಯೊಬ್ಬ ಸದಸ್ಯನೂ ತಲಾ 10 ಸಾವಿರ ರೂ. ದಂಡ ತೆರಬೇಕು ಎಂದು ಹೇಳಿದರು. ಅಂದಿನಿಂದ ಯಾರೊಬ್ಬರೂ ಅಭ್ಯಾಸಕ್ಕಾಗಲಿ, ತಂಡದ ಮೀಟಿಂಗ್‌ಗಾಗಲೀ ತಡವಾಗಿ ಬಂದಿಲ್ಲ,'' ಎಂದು ಅಪ್ಟನ್ ಟೀಮ್ ಇಂಡಿಯಾ ಜೊತೆಗಿನ ತಮ್ಮ ಒಡನಾಟವನ್ನು ವಿವರಿಸಿದ್ದಾರೆ.
ಇದೇ ವೇಳೆ ಧೋನಿ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ ಅಪ್ಟನ್, "ಧೋನಿ ಅವರ ಶಕ್ತಿಯೇ ಅವರ ತಾಳ್ಮೆ ಮತ್ತು ಸಂಯಮ. ಪಂದ್ಯದ ಯಾವುದೇ ಸ್ಥಿತಿಯಲ್ಲೂ ಅವರು ಇದನ್ನು ಕಾಯ್ದುಕೊಳ್ಳುತ್ತಾರೆ. ಒಬ್ಬ ಬಲಿಷ್ಠ ನಾಯಕನಾಗಿ ತಮ್ಮ ಬುದ್ಧಿವಂತಿಕೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ. ಸಹ ಆಟಗಾರರು ಸಂಯಮ ಕಾಯ್ದುಕೊಳ್ಳಲು ಅವರು ನೆರವಾಗುತ್ತಾರೆ,'' ಎಂದು ಗುಣಗಾನ ಮಾಡಿದ್ದಾರೆ.