ಟೀಮ್ ಇಂಡಿಯಾದ ಸರ್ವಶ್ರೇಷ್ಠ ನಾಯಕ ಯಾರು ಎನ್ನುವ ಪ್ರಶ್ನೆಗೆ ಸಾಮಾನ್ಯವಾಗಿ ಕೆಲ ಹೆಸರುಗಳು ಕೇಳಿಬರುತ್ತವೆ. ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಧೋನಿ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಸೌರವ್ ಗಂಗೂಲಿ ಎನ್ನುತ್ತಾರೆ. ಇನ್ನೂ ಕೆಲವರು ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಹೆಸರು ಹೇಳುತ್ತಾರೆ. ಧೋನಿ ಬಳಿಕ ಭಾರತ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ಹೆಸರನ್ನು ಕೂಡ ಹಲವರು ಹೇಳಬಹುದು.
ಆದರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಇದೇ ಪ್ರಶ್ನೆಯನ್ನು ಕೇಳಿದರೆ ಅವರು ಮೇಲಿನ ಯಾವ ನಾಯಕನ ಹೆಸರನ್ನೂ ಹೇಳುವುದಿಲ್ಲ. ಗೌತನ್ ಗಂಭೀರ್ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಎಂಎಸ್ ಧೋನಿ ನಾಯಕತ್ವದಲ್ಲಿ ಸುದೀರ್ಘ ಕಾಲ ಆಡಿದ್ದರೂ ಈ ಇಬ್ಬರನ್ನು ಕೂಡ ಶ್ರೇಷ್ಠ ನಾಯಕನ ಸಾಲಿಗೆ ಸೇರಿಸಿಕೊಳ್ಳುವುದಿಲ್ಲ. ಆದರೆ ಗಂಭೀರ್ ಪ್ರಕಾರ ಭಾರತ ಕಂಡ ಸರ್ವಶ್ರೇಷ್ಠ ನಾಯಕ ಯಾರು ಗೊತ್ತಾ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕನ್ನಡಿಗ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಗೌತಮ್ ಗಂಭೀರ್ ಅವರಲ್ಲಿ ಭಾರತದ ಕ್ರಿಕೆಟ್ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಯಾರು ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಂದರ್ಭದಲ್ಲಿ ಗಂಭೀರ್ ಹೇಳಿರುವ ಹೆಸರು ಬೇರೆ ಯಾರದ್ದೂ ಅಲ್ಲ. ಕನ್ನಡಿಗ ಮಾಜಿ ನಾಯಕ ಅನಿಲ್ ಕುಂಬ್ಳೆ ಭಾರತ ಕಂಡ ಸರ್ವಶ್ರೇಷ್ಠ ನಾಯಕ ಎಂದಿದ್ದಾರೆ. ಈ ಹಿಂದೆಯೂ ಗಂಭೀರ್ ಅನಿಲ್ ಕುಂಬ್ಳೆ ಅವರ ನಾಯಕತ್ವ ತನಗೆ ಬಹಳ ಇಷ್ಟ ಎನ್ನವುದನ್ನು ಗಂಭೀರ್ ಹೇಳಿಕೊಂಡಿದ್ದರು.
ಯೂಟ್ಯೂಬ್ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ರ‍್ಯಾಪಿಡ್‌ಫೈರ್ ಪ್ರಶ್ನೆಗೆ ಗೌತಮ್ ಗಂಭೀರ್ ಉತ್ತರಿಸುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಗಂಭೀರ್. ಅನಿಲ್ ಕುಂಬ್ಳೆ 2007ರಲ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಭಾರತ ತಂಡವನ್ನು ಕನ್ನಡಿಗ ಅನಿಲ್ ಕುಂಬ್ಳೆ 14 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಆದರೆ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಭಾರತ ತಂಡದ ಪ್ರದರ್ಶನ ಹೇಳಿಕೊಳ್ಳುವುಂತಾ ಮಟ್ಟದಲ್ಲಿರಲಿಲ್ಲ. 14 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಭಾತ ಗೆದ್ದುಕೊಂಡಿದ್ದರೆ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆರು ಪಂದ್ಯಗಳು ಡ್ರಾಫಲಿತಾಂಶದೊಂದಿಗೆ ಅಂತ್ಯವಾಗಿದ್ದವು.
ಅನಿಲ್ ಕುಂಬ್ಳೆ ಭಾರತದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆಯನ್ನು ಹೊಂದಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಕುಂಬ್ಳೆ 132 ಪಂದ್ಯಗಳಲ್ಲಿ 29.65ರ ಸರಾಸರಿಯಲ್ಲಿ 619 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಎರಡನೇ ಅತಿ ವೇಗವಾಗಿ 600 ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದಾರೆ ಕುಂಬ್ಳೆ. ಇನ್ನು ಒಟ್ಟಾರೆಯಾಗಿ ಅನಿಲ್ ಕುಂಬ್ಳೆ 403 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 956 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತ 2007 ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ತಮ್ಮ ಕ್ರಿಕೆಟ್ ವೃತ್ತಿ ಜೀವನದ ಸಂದರ್ಭದಲ್ಲಿ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವದ ಮೂಲಕ ಯಾವಾಗಲೂ ಸುದ್ದಿಯಾಗುತ್ತಿದ್ದ ಗಂಭೀರ್ ನಿವೃತ್ತಿಯ ಬಳಿಕವೂ ತಮ್ಮ ನೇರ ಮಾತುಗಳಿಂದಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಪ್ರಸ್ತುತ ಗಂಭೀರ್ ರಾಜಕೀಯದಲ್ಲಿಯೂ ಸಕ್ರಿಯವಾಗಿದ್ದು ಪೂರ್ವ ದೆಹಲಿಯ ಸಂಸದರಾಗಿದ್ದಾರೆ.