ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ಮುಗಿದಿದೆ. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಆಟಗಾರರು ಅಬ್ಬರಿಸಿದ್ದಾರೆ. ನವದೆಹಲಿಯಲ್ಲಿ 7 ವಿಕೆಟ್‌ಗಳಿಂದ ವಿಂಡೀಸ್ ಮಣಿಸುವ ಮೂಲಕ ಶುಭಮನ್ ಗಿಲ್ ಪಡೆ ತವರಿನಲ್ಲಿ ಮೊದಲ ಸರಣಿ ಗೆಲುವಿನ ನಗೆ ಬೀರಿದ. ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್‌ಗಳಿಂದ್ದ ಗೆದ್ದಿದ್ದ ಭಾರತ, ಎರಡನೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯನ್ನು ವಶಕ್ಕೆ ಪಡೆದಿದೆ. ಈ ಗೆಲುವು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾದ ಮನೋಬಲವನ್ನು ಹೆಚ್ಚಿಸಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಭರ್ಜರಿಯಾಗಿತ್ತು. ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 3 ಇನಿಂಗ್ಸ್‌ಗಳಲ್ಲಿ 73ರ ಸರಾಸರಿಯಲ್ಲಿ 219 ರನ್ ಕಲೆ ಹಾಕಿದ್ದಾರೆ. ಕೆಎಲ್ ರಾಹುಲ್ (196), ಶುಭಮನ್ ಗಿಲ್ (192) ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಅಧಿಕ ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು. 3 ಇನಿಂಗ್ಸ್‌ಗಳಲ್ಲಿ 175 ರನ್ ಕಲೆ ಹಾಕಿದ್ದಾರೆ. ಈ ವೇಳೆ ಒಂದು ಶತಕವೂ ಸೇರಿದೆ.

ಧ್ರುವ್ ಜುರೇಲ್ ಅವರು ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿಯ ವರೆಗೆ ಇವರು ಟೀಮ್ ಇಂಡಿಯಾ 7 ಪಂದ್ಯಗಳನ್ನು ಗೆದ್ದ ತಂಡದ ಸದಸ್ಯರಾಗಿದ್ದಾರೆ. ಈ ಮೂಲಕ ಧ್ರುವ್ ಜುರೇಲ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ವೃತ್ತಿ ಜೀವನದ ಆರಂಭದಲ್ಲಿ ಅಧಿಕ ಟೆಸ್ಟ್ ಗೆಲುವಿನಲ್ಲಿ ಸ್ಥಾನ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಪಂದ್ಯಗಳನ್ನು ಆರಂಭದಲ್ಲಿ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಪದಾರ್ಪಣೆ ಪಂದ್ಯದಿಂದ ಇಲ್ಲಿಯವರೆಗೆ ಇವರು 7 ಜಯದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಇವರು ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಭುವಿ 6 ಟೆಸ್ಟ್ ಗೆಲುವಿನ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿರುವ ತಂಡದ ಸದಸ್ಯರಾಗಿರುವ ಧ್ರುವ್ ಜುರೇಲ್, ಕಾಂಗರೂ ನಾಡಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಿಂಚುವ ಕನಸು ಕಾಣುತ್ತಿದ್ದಾರೆ. ಧ್ರುವ್ ಜುರೇಲ್ ಈ ವರೆಗೆ 7 ಟೆಸ್ಟ್ ಪಂದ್ಯಗಳ 11 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು 47ರ ಸರಾಸರಿಯಲ್ಲಿ 430 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಪದಾರ್ಪಣೆ ಮಾಡುವ ಆಸೆ ಹೊಂದಿದ್ದಾರೆ.