ಆಗಸ್ಟ್ 6 ಮಂಗಳವಾರ, ಭಾರತದ ಮಾಜಿ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 2024ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಕೊನೆ ಬಾರಿಗೆ ಆಡಿದ್ದರು. ಇದಾದ ಬಳಿಕ ದಿನೇಶ್ ಕಾರ್ತಿಕ್ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದರು.
ಇದೀಗ ದಿನೇಶ್ ಕಾರ್ತಿಕ್ ಅವರಿಗೆ ಸಂಬಂಧಿಸಿದ ದೊಡ್ಡ ಸುದ್ದಿವೊಂದು ಹೊರಬಿದ್ದಿದೆ. ಮುಂದಿನ ವರ್ಷ ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ. 2025ರ ದಕ್ಷಿಣ ಆಫ್ರಿಕಾದ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಡಿಕೆ ಮಿಂಚಲು ರೆಡಿಯಾಗುತ್ತಿದ್ದಾರೆ.

ಪಾರ್ಲ್ ರಾಯಲ್ಸ್ ತಂಡದ ಪರ ದಿನೇಶ್ ಕಾರ್ತಿಕ್ ಕಣಕ್ಕಿಳಿಯಲಿದ್ದು, ಮಂಗಳವಾರ ಅವರು ದಕ್ಷಿಣ ಆಫ್ರಿಕಾದ ಟಿ20 ಕ್ರಿಕೆಟ್ ಲೀಗ್‌ನ ಮೂರನೇ ಋತುವಿಗಾಗಿ ಪಾರ್ಲ್ ರಾಯಲ್ಸ್‌ಗೆ ಸಹಿ ಹಾಕಿದ್ದಾರೆ. ಈ ಮೂಲಕ ಡಿಕೆ ಮುಂದಿನ ವರ್ಷ ಜನವರಿ 9 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾದ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
39 ವರ್ಷದ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಸುದೀರ್ಘ ಕಾಲ ಆಡಿದ್ದು, ಈ ವರ್ಷದ ಜೂನ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಇದಾದ ನಂತರ ಮುಂಬರುವ ಋತುವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಫ್ರಾಂಚೈಸಿ ನೇಮಿಸಿದೆ.
ಕ್ರಿಕೆಟ್‌ಗೆ ಮರಳಿರುವ ಬಗ್ಗೆ ಮಾತನಾಡಿರುವ ಡಿಕೆ, ಸಾಕಷ್ಟು ಅನುಭವ, ಗುಣಮಟ್ಟ ಮತ್ತು ಸಾಮರ್ಥ್ಯ ಹೊಂದಿರುವ ಪಾರ್ಲ್ ರಾಯಲ್ಸ್ ತಂಡವನ್ನು ಸೇರಲು ತುಂಬಾ ಸಂತೋಷವಾಗಿದೆ. ಖಂಡಿತವಾಗಿಯೂ ಈ ಗುಂಪಿಗೆ ಸೇರಲು ಎದುರುನೋಡುತ್ತಿದ್ದೇನೆ. ಈ ಋತುವಿಗೆ ಉಪಯುಕ್ತವಾದ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ನನಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಮತ್ತು ಅಲ್ಲಿಗೆ ಹೋದ ಬಗ್ಗೆ ಸಾಕಷ್ಟು ನೆನಪುಗಳಿವೆ. ಈ ಅವಕಾಶ ಬಂದಾಗ ನಾನು ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ಅವಕಾಶ ಮತ್ತೆ ಕ್ರಿಕೆಟ್‌ಗೆ ಮರಳಲು ಉತ್ತಮವಾಗಿದೆ. ಸ್ಪರ್ಧಾತ್ಮಕ ಕ್ರಿಕೆಟ್ ಹಾಗು ಈ ಲೀಗ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ವಿಶೇಷವಾಗಿದೆ ಎಂದು ಡಿಕೆ ತಿಳಿಸಿದ್ದಾರೆ.
ಡಿಕೆ ಐಪಿಎಲ್ 2024 ರಲ್ಲಿ ಆರ್‌ಸಿಬಿ ಪರ ತಮ್ಮ ಕೊನೆಯ ಟಿ20 ಲೀಗ್ ಪಂದ್ಯವನ್ನು ಆಡಿದ್ದರು. ಈ ಋತುವಿನಲ್ಲಿ ಅವರು 14 ಪಂದ್ಯಗಳಿಂದ 187.36 ಸ್ಟ್ರೈಕ್ ರೇಟ್‌ನಲ್ಲಿ 326 ರನ್ ಗಳಿಸಿದ್ದರು. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಪರ್ಲ್ ರಾಯಲ್ಸ್ ತಂಡ: ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಜಾರ್ನ್ ಫಾರ್ಚೂನ್, ಫೆಹ್ಲುಕ್ವಾಯೊ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಿಚೆಲ್ ವ್ಯಾನ್ ಬ್ಯೂರೆನ್, ಕೋಡಿ ಯೂಸುಫ್, ಕೀತ್ ಡುಡ್ಜಿನ್, ನಕಾಬಾ ಪೀಟರ್, ಕ್ವೆನಾ ಮಫಕಾ, ಲುವಾನ್-ಡ್ರೆ ಪ್ರಿಟೋರಿಯಸ್.