ಈ ಕಾರಣಕ್ಕೆ ಕೊಹ್ಲಿಗೆ ಸಚಿನ್ ಹೆಸರಿನಲ್ಲಿರುವ 100 ಶತಕಗಳ ದಾಖಲೆ ಮುರಿಯುವುದು ಅಸಾಧ್ಯ: ದಿನೇಶ್ ಕಾರ್ತಿಕ್
ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್ ಮಾದರಿಯಲ್ಲಿ 47ನೇ ಶತಕ ಸಿಡಿಸಿದಂತಾಗಿದೆ. ಈ ಮೂಲಕ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯ ಸನಿಹಕ್ಕೆ ತಲುಪಿದ್ದಾರೆ ಕೊಹ್ಲಿ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಸಚಿನ್ ದಾಖಲೆ ಮುರಿಯಲು ಇನ್ನು ಕೇವಲ ಮೂರು ಶತಕಗಳು ಮಾತ್ರವೇ ಬೇಕಾ. ಆದರೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಒಟ್ಟಾರೆ ಶತಕಗಳ ದಾಖಲೆ ಮುರಿಯುವುದು ಕೊಹ್ಲಿಗೆ ಸುಲಭವಿಲ್ಲ. ಸಚಿನ್ ತೆಂಡೂಲ್ಕರ್ ಒಟ್ಟಾರೆಯಾಗಿ 100 ಶತಕಗಳನ್ನು ಬಾರಿಸಿದ್ದು ಅದನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ 23 ಶತಕಗಳನ್ನು ಬಾರಿಸಬೇಕಿದೆ. ಹಾಗಿದ್ದರೂ ಕೊಹ್ಲಿಯಿಂದ ಈ ದಾಖಲೆ ಮುರಿಯುವ ಸಾಮರ್ಥ್ಯವಿದೆ ಎನ್ನುವುದು ಕೆಲ ಕ್ರಿಕೆಟ್ ಪಂಡಿತರ ಅಭಿಪ್ರಾಯ.

ಆದರೆ ಭಾರತದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಈ ಅಭಿಪ್ರಾಯವನ್ನು ನಿರಾಕರಿಸಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿಯಿಂದ ಮುರಿಯುವುದು ಅಸಾಧ್ಯ ಎಂದಿದ್ದಾರೆ ಡಿಕೆ. ಇದಕ್ಕೆ ಅವರು ಕಾರಣವನ್ನು ಕೂಡ ವಿವರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ 100 ಶತಕಗಳ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೂ ಕೂಡ 23 ಶತಕಗಳ ಅಗತ್ಯವಿದೆ. ವಿರಾಟ್ ಕೊಹ್ಲಿ ಈಗಾಗಲೇ 35ರ ಹರೆಯದಲ್ಲಿರುವ ಕಾರಣದಿಂದಾಗಿ ಇನ್ನು 4-5 ವರ್ಷಗಳ ಕಾಲ ಆಡುವ ಸಾಧ್ಯತೆ ಮಾತ್ರವೇ ಇದೆ. ಹಾಗಿದ್ದರೂ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರಾ? ವಿರಾಟ್ ಕೊಹ್ಲಿ ಪ್ರತಿ ಬಾರಿ ಶತಕ ಬಾರಿಸಿದಾಗಲೂ ಅಭಿಮಾನಿಗಳು ಈ ಬಗ್ಗೆ ಯೋಚನೆ ಮಾಡುತ್ತಲೇ ಇರುತ್ತಾರೆ.
ಇದೇ ಕಾರಣಕ್ಕೆ ದಿನೇಶ್ ಕಾರ್ತಿಕ್ ಕೂಡ ಪ್ರತಿಕ್ರಿಯೆ ನೀಡುತ್ತಾ ಕೊಹ್ಲಿಯಿಂದ ಸಚಿನ್ ದಾಖಲೆ ಮುರಿಯುವುದು ಕಷ್ಟ ಎಂದಿದ್ದಾರೆ. ಕ್ರಿಕ್ ಬಜ್ ಸಂವಾದದಲ್ಲಿ ಭಾಗಿಯಾಗಿದ್ದ ದಿನೇಶ್ ಕಾರ್ತಿಕ್ ದಿಗ್ಗಜ ಕ್ರಿಕೆಟಿಗ ಸಚೊನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ವೃತ್ತಿ ಜೀವನದ ಒಂದು ಬಹುದೊಡ್ಡ ವ್ಯತ್ಯಾಸವನ್ನು ಉಲ್ಲೇಖಿಸಿದ್ದಾರೆ. ಸಚಿನ್ ತೆಂಡೂಲ್ಕರ್ ತನ್ನ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ 20ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ್ದರು. ಈ ನಾಲ್ಕು ವರ್ಷವನ್ನು ಹೊಂದಾಣಿಕೆ ಮಾಡುವುದು ಬಹಳ ಕಷ್ಟ ಎಂದಿದ್ದಾರೆ ದಿನೇಶ್ ಕಾರ್ತಿಕ್.
"ಆ ನಾಲ್ಕು ವರ್ಷಗಳೇ ಈ ಇಬ್ಬರ ನಡುವಿನ ವ್ಯತ್ಯಾಸವಾಗಿರಬಹುದು. ಈ 16ರಿಂದ 21 ವರ್ಷಗಳ ನಡುವಿನ ವ್ಯತ್ಯಾಸವನ್ನು 34- 40 ವರ್ಷದ ಮಧ್ಯೆ ಸಾಧಿಸಬೇಕಿದೆ. ಆದರೆ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸ್ಪರ್ಶಿಸಿದರೆ, ಅಲ್ಪದರಲ್ಲಿ ಹಿಂದುಳಿದರೆ ಅಥವಾ ಅವರನ್ನು ಹಿಂದಿಕ್ಕಿದರೆ ಆತ ಅತ್ಯದ್ಭುತ ಸಾಧನೆ ಮಾಡಿದ್ದಾರೆ ಎನ್ನುವುದನ್ನು ನೀವು ಹೇಳಲೇಬೇಕಾಗುತ್ತದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications