ಕನ್ನಡ ರಾಜ್ಯೋತ್ಸವ, ಕನ್ನಡಿಗ ದ್ರಾವಿಡ್‌ಗೆ ಐಸಿಸಿ 'ಹಾಲ್ ಆಫ್ ಫೇಮ್' ಗೌರವ!

ಬೆಂಗಳೂರು, ನವೆಂಬರ್ 1: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 'ಹಾಲ್ ಆಫ್ ಫೇಮ್' ಪುರಸ್ಕಾರ ನೀಡಿ ಗೌರವಿಸಿದೆ. ಕನ್ನಡ ರಾಜ್ಯೋತ್ಸವದಂದೇ (ನವೆಂಬರ್ 1) ಪ್ರತಿಭಾವಂತ ಕನ್ನಡಿಗನಿಗೆ ಅಂತಾರಾಷ್ಟ್ರೀಯ ಗೌರವ ಲಭಿಸಿದ್ದು ಕಾಕತಾಳೀಯವೂ ಅರ್ಥಪೂರ್ಣವೂ ಎನಿಸಿತು.
ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಭಾರತ vs ವೆಸ್ಟ್ ಇಂಡೀಸ್ ನಡುವಿನ 5ನೇ ಮತ್ತು ಕೊನೆಯ ಏಕದಿನ ಪಂದ್ಯದ ವೇಳೆ ದ್ರಾವಿಡ್ ಈ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಭಾಜನರಾದರು. ಗೌರವಾರ್ಪಣೆಯನ್ನು ಭಾರತದ ದಂತಕತೆ ಸುನಿಲ್ ಗವಾಸ್ಕರ್ ನೆರವೇರಿಸಿದರು.
ಭಾರತ ಪರ ಈ ಅತ್ಯುನ್ನತ ಗೌರವ ಸ್ವೀಕರಿಸಿದ ಐದನೇ ಆಟಗಾರನಾಗಿ 'ಗ್ರೇಟ್ ವಾಲ್ ಆಫ್ ಇಂಡಿಯಾ' ಖ್ಯಾತಿಯ ರಾಹುಲ್ ದ್ರಾವಿಡ್ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ಭೀಷಣ್ ಸಿಂಗ್ ಬೇಡಿ, ಕಪಿಲ್ ದೇವ್, ಗವಾಸ್ಕರ್, ಅನಿಲ್ ಕುಂಬ್ಳೆ ಹಾಲ್ ಆಫ್ ಫೇಮ್ ಸ್ವೀಕರಿಸಿದ್ದರು.
ಜುಲೈ 2ರಂದು ಐಸಿಸಿಯ ಹಾಲ್ ಆಫ್ ಫೇಮ್ ಗೌರವಕ್ಕೆ ದ್ರಾವಿಡ್, ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರನ್ನು ಹೆಸರಿಸಲಾಗಿತ್ತು. ಅದರಂತೆ ಇಂದು ದ್ರಾವಿಡ್, ಪಾಟಿಂಗ್ ಮತ್ತು ಇಂಗ್ಲೆಂಡ್ ಆಟಗಾರ್ತಿ ಕ್ಲೇರ್ ಟೇಲರ್ ಅವರು ಗೌರವ ಸ್ವೀಕರಿಸಿದರು.
ದ್ರಾವಿಡ್, ಟೆಸ್ಟ್ ಕ್ರಿಕೆಟ್ ನಲ್ಲಿ 164 ಪಂದ್ಯಗಳಲ್ಲಿ 36 ಶತಕಗಳೊಂದಿಗೆ 13,288 ರನ್ ಕಲೆ ಹಾಕಿದ್ದಾರೆ. 344 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್, 12 ಸೆಂಚುರಿಗಳೊಂದಿಗೆ 10,889 ರನ್ ಗಳಿಸಿದ್ದಾರೆ. ಕೇವಲ ಒಂದೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿರುವ ದ್ರಾವಿಡ್ ಅದ್ಭುತ ಸ್ಲಿಪ್ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications