ಪೂಜಾರ ಅವರನ್ನು ಕೈಬಿಟ್ಟಿದ್ದು ಭಾರತದ ಬಲವನ್ನು ಸೂಚಿಸುತ್ತದೆ: ಹಸ್ಸಿ

ಬೆಂಗಳೂರು, ಆಗಸ್ಟ್ 2: ಇಂಗ್ಲೆಂಡ್ ನ ಎಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ vs ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರನ್ನು ಕೈ ಬಿಟ್ಟಿದ್ದು ಒಂದರ್ಥದಲ್ಲಿ ಭಾರತದ ಬಲವನ್ನು ಸೂಚಿಸುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಹೇಳಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಆಗಸ್ಟ್ 1)ರಂದು ಕರ್ನಾಟಕ ಪ್ರೀಮಿಯರ್ ಲೀಗ್ ಅಂಗವಾಗಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹಸ್ಸಿ ಮಾತನಾಡಿದರು.
'ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ ಪಂದ್ಯದಿಂದ ಪೂಜಾರ ಅವನ್ನು ಹೊರಗಿಟ್ಟಿದ್ದು ಒಂದು ರೀತಿಯಲ್ಲಿ ಭಾರತದ ಬಲವೆ. ಭಾರತ ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವುದನ್ನು ಇದು ಸೂಚಿಸುತ್ತದೆ' ಎಂದು ಮೈಕ್ ಹಸ್ಸಿ ಅಭಿಪ್ರಾಯಪಟ್ಟರು.
ಕಾರ್ಬನ್ ಸ್ಮಾರ್ಟ್ ಫೋನ್ಸ್ ಪ್ರಾಯೋಜಕತ್ವದಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕೆಎಸ್ಸಿಎ ಅಧ್ಯಕ್ಷ ಸಂಜಯ್ ದೇಸಾಯಿ, ಕೆಎಸ್ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ಉಪಸ್ಥಿತರಿದ್ದರು. ಪ್ರೊ ಕಬಡ್ಡಿ ಲೀಗ್ ನಿರ್ದೇಶಕ ಚಾರು ಶರ್ಮಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಯಕ್ಷಗಾನ ಮೆರಗಿನ ತಂಡ ಹಸ್ಸಿ ಅವರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದು ಗಮನ ಸೆಳೆಯಿತು.

ದಾಳಿಕಾರಕ ಬೌಲರ್ ಗಳು
ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಭಾರತದಲ್ಲಿ ದಾಳಿಕಾರಕ ಬೌಲರ್ ಗಳಿದ್ದಾರೆ. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝೆಲ್ವುಡ್, ನಾಥನ್ ಲಿಯಾನ್, ಪ್ಯಾಟ್ ಕಮ್ಮಿನ್ಸ್ ಅವರಂತೆ ಉತ್ತಮ ಬೌಲರ್ ಗಳನ್ನು ಭಾರತ ತಂಡ ಒಳಗೊಂಡಿದೆ ಎಂದು ಹಸ್ಸಿ ಈ ಸಂದರ್ಭದಲ್ಲಿ ತಿಳಿಸಿದರು.

ಬ್ಯಾಟಿಂಗ್ ವಿಭಾಗದ ಬಗ್ಗೆ ಸಣ್ಣ ಭೀತಿ
ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡದಿಂದ ಹೊರಗಿರುವುದರಿಂದ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗದ ಬಗ್ಗೆ ಸಣ್ಣಭೀತಿಯಿದೆ. ಆದರೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯ ವೇಳೆ ಭಾರತಕ್ಕಿದು ವರದಾನವಾಗಲಿದೆ. ಸರಣಿ ಗೆದ್ದುಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ. ಜೊತೆಗೆ ವಾರ್ನರ್, ಸ್ಮಿತ್ ಹೊರಗಿರುವುದು ಆಸ್ಟ್ರೇಲಿಯಾದ ಯುವ ಪ್ರತಿಭೆಗಳು ಬೆಳಗಲು ದಾರಿಯಾಗಿದೆಯೆಂದೂ ಸಕಾರಾತ್ಮಕವಾಗಿ ಭಾವಿಸಬಹುದು ಎಂದು ಹಸ್ಸಿ ಅಭಿಪ್ರಾಯಿಸಿದರು.

ಧೋನಿಯ ತಾಳ್ಮೆಯಿಂದ ಕಲಿಯೋದಿದೆ
ಟಿ20ಯಂತ ಚುಟುಕು ಕ್ರಿಕೆಟ್ ನಲ್ಲಿ ಯುವಕರಿಗೆ ನೀವು ಹೇಳುವ ಸಂದೇಶವೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಸ್ಸಿ, 'ಇತರ ಮಾದರಿಗಳಿಗೆ ಹೋಲಿಸಿದರೆ ಟಿ20ಗೆ ಹೊಂದಿಕೊಳ್ಳುವುದು ಸುಲಭವಲ್ಲ. ಯುವ ಆಟಗಾರರಿಗೆ ಹೇಳೋದಿಷ್ಟೆ; ತಾಳ್ಮೆಯನ್ನು ಅನುಸರಿಸಿ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಭಾರತದ ಧೋನಿ ಅವರಿಂದ ನಾನು ತಾಳ್ಮೆಯ ಪಾಠ ಕಲಿತುಕೊಂಡಿದ್ದೇನೆ' ಎಂದರು.

ಬೆಂಗಳೂರಿನಲ್ಲಿ ನೆನಪುಗಳ ಬುಗ್ಗೆಯಿದೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರತಿಭೆಗಳನ್ನು ಕರ್ನಾಟಕ ಹುಟ್ಟುಹಾಕಿದೆ. ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವಲ್ಲಿ ಕರ್ನಾಟಕ ದೊಡ್ಡ ಇತಿಹಾಸವನ್ನು ಹೊಂದಿದೆ. ನಾನೂ ಪಂದ್ಯಕ್ಕಾಗಿ ಈ ಮೈದಾನಕ್ಕಾಗಿ ಬಂದಿದ್ದಿದೆ. ಹಾಗಾಗಿ ಇಲ್ಲಿ ನನ್ನ ಸಾಕಷ್ಟು ನೆನಪುಗಳಿವೆ ಎಂದು ಮೈಕ್ ತಿಳಿಸಿದರು.

ಕಲಿಯುತ್ತಲೇ ಬೆಳೆಯಿರಿ
ತುಂಬಿದ ಮೈದಾನ, ಕ್ರೀಡಾಭಿಮಾನಿಗಳ ಕೇಕೆ ಇವುಗಳ ಮಧ್ಯೆ ಮಿಂಚಬೇಕೆಂದು ಹೆಚ್ಚಿನ ಯುವಕರು ಕನಸನ್ನಿಟ್ಟುಕೊಂಡಿರುತ್ತಾರೆ. ಒಮ್ಮಲೇ ಬೆಳೆಯೋಕ್ಕಾಗೋಲ್ಲ. ಎದ್ದು-ಬಿದ್ದು ಕಲಿಯಬೇಕು. ಕಲಿಯುತ್ತಲೇ ಮುನ್ನಡೆಯಬೇಕು. ಅವಕಾಶಗಳನ್ನು ಬಳಸಿಕೊಂಡು ಪಂದ್ಯಗಳನ್ನು ಆಡುತ್ತಾ ಹೋದಂತೆ ಅನುಭವಗಳು ಪಕ್ವವಾಗುತ್ತವೆ. ಆಗ ತಂತಾನೇ ನಾವು ಬೆಳೆಯಲು ದಾರಿಯಾಗುತ್ತವೆ. ದೊಡ್ಡ ಪಂದ್ಯವನ್ನು ಆಡುವಾಗ ಒತ್ತಡಗಳು ಇದ್ದೇಇದೆ. ಆದರೆ ತಾಳ್ಮೆ ಆ ಹೊತ್ತಿನಲ್ಲಿ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎಂದು ಹಸ್ಸಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications