ಬುಧವಾರ, ಜುಲೈ 5ರಂದು ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಆರಂಭವಾದ 2023ರ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇಂದ್ರ ವಲಯ ವಿರುದ್ಧ ಪಶ್ಚಿಮ ವಲಯ ಸಾಧಾರಣ ಮೊತ್ತ ಗಳಿಸಿದೆ.
ಪಶ್ಚಿಮ ವಲಯದ ನಾಯಕ ಪ್ರಿಯಾಂಕ್ ಪಾಂಚಾಲ್ ಅವರು ಶಿವಂ ಮಾವಿ ನೇತೃತ್ವದ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 216 ರನ್ ಕಲೆಹಾಕಿದೆ.
ಮುಂಬೈನ ಸ್ಟಾರ್ ಆಟಗಾರರಾದ ಪೃಥ್ವಿ ಶಾ, ಸರ್ಫರಾಜ್ ಖಾನ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಸ್ಟಾರ್ ಆಟಗಾರರು ಕೇಂದ್ರ ವಲಯ ವಿರುದ್ಧ ವಿಫಲರಾಗಿದ್ದಾರೆ. ಪೃಥ್ವಿ ಶಾ 54 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ ಕೇವಲ ಏಳು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಪಶ್ಚಿಮ ವಲಯ ತಂಡದಲ್ಲಿ ಚೇತೇಶ್ವರ ಪೂಜಾರ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಮತ್ತು ಸರ್ಫರಾಜ್ ಖಾನ್ ಅವರಂತಹ ಆಟಗಾರರನ್ನೊಳಗೊಂಡಡಿದ್ದು, ನೆಚ್ಚಿನ ತಂಡವೆಂದು ಪರಿಗಣಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಅಂತಹದ್ದೇನೂ ನಡೆಯಲಿಲ್ಲ.
ಪಶ್ಚಿಮ ವಲಯ ನಾಯಕ ಪ್ರಿಯಾಂಕ್ ಪಾಂಚಾಲ್ 13 ರನ್, ಅನುಭವಿ ಚೇತೇಶ್ವರ ಪೂಜಾರ 28 ರನ್, ಸರ್ಫರಾಜ್ ಖಾನ್ ಸೊನ್ನೆ ಸುತ್ತಿದರು. ಹೇಟ್ ಪಟೇಲ್ 5 ರನ್, ಅತಿತ್ ಶೇಠ್ 129 ಎಸೆತಗಳಲ್ಲಿ 74 ರನ್, ಧರ್ಮೇಂದ್ರ ಜಡೇಜಾ 39 ರನ್ ಗಳಿಸಿದರು.
ಕೇಂದ್ರ ವಲಯ ತಂಡದ ಪರ ನಾಯಕ ಶಿವಂ ಮಾವಿ 18 ಓವರ್‌ಗಳಲ್ಲಿ 43 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಅವೇಶ್ ಖಾನ್, ಯಶ್ ಠಾಕೂರ್, ಸೌರಭ್ ಕುಮಾರ್ ಮತ್ತು ಸಾರಾನ್ಶ್ ಜೈನ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಕಡೆಗಣಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದ ಸರ್ಫರಾಜ್ ಖಾನ್ 12 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯುವಲ್ಲಿ ವಿಫಲರಾದರು. ವೆಸ್ಟ್ ಇಂಡೀಸ್‌ನ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಸೂರ್ಯಕುಮಾರ್ ಯಾದವ್ ಅವರಿಂದ ದೊಡ್ಡ ಮೊತ್ತ ಬರಲಿಲ್ಲ.
ಕೆರಿಬಿಯನ್ ಪ್ರವಾಸಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆಯ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಪ್ರದರ್ಶನದ ಕಾರಣವಾಗಿದೆ. 2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಸೂರ್ಯಕುಮಾರ್ 16 ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ 605 ರನ್ ಗಳಿಸಿದರು.
ಪೃಥ್ವಿ ಶಾ 2023ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಸಮೇತ 106 ರನ್ ಗಳಿಸಿದರು. ಸರ್ಫರಾಜ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ ನಾಲ್ಕು ಪಂದ್ಯಗಳನ್ನು ಆಡಿದರು ಮತ್ತು 53 ರನ್ ಗಳಿಸಿದರು.
ಸರ್ಫರಾಜ್ ಖಾನ್ ಅವರು ರಣಜಿ ಟ್ರೋಫಿಯಲ್ಲಿ ಅಧಿಕ ರನ್ ಗಳಿಸಿದ್ದಾರೆ. ಮುಂಬೈ ತಂಡದ ಪರ ಕಳೆದ ಮೂರು ಋತುಗಳ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 79.65ರ ಸರಾಸರಿಯಲ್ಲಿ 3,505 ರನ್ ಗಳಿಸಿದ್ದರು.