ಗುರುವಾರ, ಜುಲೈ 6ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ವಲಯ ತಂಡವು ಉತ್ತರ ವಲಯ ವಿರುದ್ಧ ಹಿನ್ನಡೆ ಅನುಭವಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತರ ವಲಯದ 198 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ವಲಯ ಎರಡನೇ ದಿನದಾಟದಲ್ಲಿ 195 ರನ್‌ಗಳಿಗೆ ಆಲೌಟ್ ಆಯಿತು.
ಇನ್ನು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಉತ್ತರ ವಲಯ 2 ವಿಕೆಟ್‌ಗೆ 51 ರನ್ ಗಳಿಸಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್‌ಗಳ ಮುನ್ನಡೆ ಸಾಧಿಸಿದೆ. 3ನೇ ದಿನದಂದು ಉತ್ತಮವಾಗಿ ಆಡುವ ಮೂಲಕ ದೊಡ್ಡ ಟಾರ್ಗೆಟ್ ನೀಡಲು ಎದುರು ನೋಡುತ್ತಿದೆ.

ಮೊದಲ ದಿನದಂತ್ಯದಲ್ಲಿ 4 ವಿಕೆಟ್‌ಗೆ 63 ರನ್ ಗಳಿಸಿದ್ದ ದಕ್ಷಿಣ ವಲಯ ಎರಡನೇ ದಿನದಾಟ ಆರಂಭಿಸಿ ದೊಡ್ಡ ಮೊತ್ತವನ್ನು ನಿರ್ಮಿಸುವ ಅವಕಾಶವನ್ನು ಹೊಂದಿತ್ತು. ಆದರೆ ಉತ್ತರ ವಲಯ ತಂಡದ ಬೌಲರ್‌ಗಳು ನಿರಂತರ ಒತ್ತಡದಲ್ಲಿ ಹೇರಿದ್ದರಿಂದಾಗಿ ಸರ್ವಪತನ ಕಂಡಿತು.
ದಕ್ಷಿಣ ವಲಯ ತಂಡದ ಪರ ಉಪನಾಯಕ ಮಯಾಂಕ್ ಅಗರ್ವಾಲ್ 115 ಎಸೆತಗಳಲ್ಲಿ 10 ಬೌಂಡರಿ ಸಮೇತ 76 ರನ್ ಗಳಿಸಿ ಔಟಾದರು. ಇನ್ನು ತಿಲಕ್ ವರ್ಮಾ 101 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 46 ರನ್ ಗಳಿಸಿದರು.
ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 12 ರನ್ ಮತ್ತು ಸಾಯಿ ಕಿಶೋರ್ 21 ರನ್ ಗಳಸಿದ್ದು ಬಿಟ್ಟರೆ, ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟಲಿಲ್ಲ. ಮಯಾಂಕ್ ಅಗರ್ವಾಲ್ ಮತ್ತು ತಿಲಕ್ ವರ್ಮಾ 110 ರನ್‌ಗಳ ಜೊತೆಯಾಟ ನೀಡಿದರು.
Duleep Trophy 2023 Semifinal: ಸ್ಟಾರ್ ಆಟಗಾರರ ಹೊರತಾಗಿಯೂ ಕೇಂದ್ರ ವಲಯ ವಿರುದ್ಧ ಕುಸಿದ ಪಶ್ಚಿಮ ವಲಯ
ಕರ್ನಾಟಕದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ 2022-23ರ ರಣಜಿ ಟ್ರೋಫಿ ಋತುವಿನಲ್ಲಿ 13 ಇನ್ನಿಂಗ್ಸ್‌ಗಳಿಂದ 990 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಉತ್ತರ ವಲಯ ತಂಡದ ಪರ ಬೌಲಿಂಗ್‌ನಲ್ಲಿ ನಾಯಕ ಜಯಂತ್ ಯಾದವ್ 11.4 ಓವರ್‌ಗಳಲ್ಲಿ 38 ರನ್ ನೀಡಿ 3 ವಿಕೆಟ್ ಪಡೆದರೆ, ವೈಭವ್ ಅರೋರಾ 19 ಓವರ್‌ಗಳಲ್ಲಿ 57 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಬಲ್ತೇಜ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಎರಡೆರಡು ವಿಕಟ್ ಪಡೆದು ಮಿಂಚಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಉತ್ತರ ವಲಯ 51 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಧ್ರುವ್ ಶೋರೆ 5 ರನ್ ಮತ್ತು ಪ್ರಶಾಂತ್ ಚೋಪ್ರಾ 19 ರನ್ ಗಳಿಸಿ ಔಟಾಗಿದ್ದರೆ, ಅಂಕಿತ್ ಕಲ್ಸಿ 21 ರನ್, ಪ್ರಭ್‌ಸಿಮ್ರಾನ್ 6 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಕ್ಷಿಣ ವಲಯ ತಂಡದ ವಿದ್ವತ್ ಕಾವೇರಪ್ಪ ಮತ್ತು ವಿಜಯಕುಮಾರ್ ವೈಶಾಕ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.