ನವೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗು ಟಿ20 ಸರಣಿ ವೇಳೆ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಗಾಯಗೊಂಡಿದ್ದರು. ಪರಿಣಾಮ ಅವರು ಆಸ್ಟ್ರೇಲಿಯಾ ವಿರುದ್ಧದ ಎರಡು ಸರಣಿಗಳನ್ನು ಕಳೆದುಕೊಂಡಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಿರುವ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಭರವಸೆಯ ಆಟಗಾರ ಫಿಲ್ ಸಾಲ್ಟ್ ನಾಯಕನ್ನಾಗಿ ಮುನ್ನಡೆಸಿದರೆ, ಏಕದಿನ ಸರಣಿಯಲ್ಲಿ ತಂಡಕ್ಕೆ ಹ್ಯಾರಿ ಬ್ರೂಕ್ ನಾಯಕನಾಗಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧ 3-2 ಅಂತರದಲ್ಲಿ ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ಏಕದಿನ ಸರಣಿ ಕಳೆದುಕೊಂಡಿತ್ತು. ಈಗ ನಾಯಕ ಜೋಸ್ ಬಟ್ಲರ್ ಮರಳಿರುವುದು ಇಂಗ್ಲೆಂಡ್ ತಂಡಕ್ಕೆ ಬಲಬಂದಂತಾಗಿದೆ.
ಬಟ್ಲರ್ ಹೊರತಾಗಿ, ಲೆಗ್-ಸ್ಪಿನ್ನರ್ ಜಾಫರ್ ಚೋಹಾನ್ ಅವರು ಕೂಡ ಮೊದಲ ಬಾರಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ವೇಗದ ಬೌಲರ್ ಜಾನ್ ಟರ್ನರ್ ಮತ್ತು ಸ್ಪಿನ್ ಆಲ್ ರೌಂಡರ್ ಡ್ಯಾನ್ ಮೌಸ್ಲಿ ಅವರು ಸಹಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆರಿಬಿಯನ್ ಪ್ರವಾಸದಲ್ಲಿಯೂ ಟರ್ನರ್ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಮತ್ತೊಂದೆಡೆ, ಮೌಸ್ಲಿ ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.
ವೆಸ್ಟ್ ಇಂಡೀಸ್‌ನಲ್ಲಿ ಇಂಗ್ಲೆಂಡ್ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿಯು ಅಕ್ಟೋಬರ್ 31 ರಿಂದ ಪ್ರಾರಂಭವಾಗಲಿದೆ. ಮೊದಲ ಎರಡು ಏಕದಿನ ಪಂದ್ಯಗಳು ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾದಲ್ಲಿ ನಡೆಯಲಿದೆ. ಬಾರ್ಬಡೋಸ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಟಿ20 ಸರಣಿ ನವೆಂಬರ್ 9 ರಿಂದ ಆರಂಭವಾಗಲಿದೆ. ಮೊದಲ ಎರಡು ಪಂದ್ಯಗಳು ಬಾರ್ಬಡೋಸ್‌ನಲ್ಲಿ ನಡೆಯಲಿವೆ. ಉಳಿದ ಮೂರು ಪಂದ್ಯಗಳನ್ನು ಸೇಂಟ್ ಲೂಸಿಯಾದ ಗ್ರೋಸ್ ಐಲೆಟ್, ಬ್ಯೂಸೆಜರ್ ಸ್ಟೇಡಿಯಂಗಳಲ್ಲಿ ಆಯೋಜಿಸಲಾಗಿದೆ. ಈ ಎರಡು ಸರಣಿಗಳಲ್ಲಿ ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ನಾಯಕನ್ನಾಗಿ ಮುನ್ನಡೆಸಲಿದ್ದಾರೆ.
ಈ ಎರಡು ಸರಣಿಗಳ ಗೆಲುವಿನ ಮೇಲೆ ಇಂಗ್ಲೆಂಡ್ ಕಣ್ಣಿಟ್ಟಿದೆ. ಆದರೆ, ತವರಿನಲ್ಲಿ ವಿಂಡೀಸ್ ಪಡೆಯನ್ನು ಸೋಲಿಸುವುದು ಆಂಗ್ಲರಿಗೆ ಸುಲಭದ ಮಾತಲ್ಲ. ಇತ್ತೀಚೆಗೆ ವಿಂಡೀಸ್ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.
ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಜಾಕೋಬ್ ಬೆಥೆಲ್, ಜಾಫರ್ ಚೋಹನ್, ಸ್ಯಾಮ್ ಕುರಾನ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಮಹಮೂದ್, ಡಾನ್ ಮೌಸ್ಲಿ, ಜೇಮೀ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜಾನ್ ಟರ್ನರ್.