
ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈಸ್ಟ್ರೋವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಎರಡನೇ ವೇಗದ ಶತಕ ದಾಖಲಿಸುವ ಮೂಲಕ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದಾರೆ.
ನ್ಯೂಜಿಲೆಂಡ್ ನೀಡಿದ್ದ 299ರನ್‌ಗಳ ಮೊತ್ತವನ್ನ ಸುಲಭವಾಗಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಕೇವಲ 50 ಓವರ್‌ಗಳಲ್ಲಿ ಗುರಿ ತಲುಪಿ ಐದು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಇದಕ್ಕೆ ಕಾರಣ ಜಾನಿ ಬೈಸ್ಟ್ರೋವ್ ಅಬ್ಬರದ ಆಟವಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ಸ್ಟೈಲ್‌ನಲ್ಲಿ ಬ್ಯಾಟ್ ಬೀಸಿದ ಜಾನಿ ಬೈಸ್ಟ್ರೋವ್ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿದ್ದಾರೆ. ಕೇವಲ 77 ಎಸೆತಗಳಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್ ಬ್ಯಾಟರ್ ಅಮೋಘ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು.
ಮೊದಲು 50 ಎಸೆತಗಳಲ್ಲಿ 50 ರನ್ ದಾಖಲಿಸಿದ್ದ ಬೈಸ್ಟ್ರೋವ್, ನಂತರದ 50 ರನ್‌ಗಳನ್ನ ಕೇವಲ 27 ಎಸೆತಗಳಲ್ಲಿ ದಾಖಲಿಸಿರುವುದು ವಿಶೇಷ. ಈ ಮೂಲಕ ಅಬ್ಬರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸ್ವಲ್ಪದರಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ಬ್ಯಾಟರ್ ಎಂಬ ಸಾಧನೆಯನ್ನ ಮಿಸ್ ಮಾಡಿಕೊಂಡರು.
ಇಂಗ್ಲಿಷ್ ಬ್ಯಾಟರ್ ಗಿಲ್ಬರ್ಟ್ ಜೆಸ್ಸಾಪ್ ಅವರು 1902 ರಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ 76 ಎಸೆತಗಳಲ್ಲಿ ಶತಕ ಗಳಿಸಿದರು. ಸುಮಾರು 120 ವರ್ಷಗಳ ಹಳೆಯ ದಾಖಲೆಯನ್ನ ಮುರಿಯುವ ಅವಕಾಶ ಬೈಸ್ಟ್ರೋವ್‌ಗಿತ್ತು. ಆದ್ರೆ ಸ್ವಲ್ಪದರಲ್ಲೇ ಮಿಸ್ ಆಗಿ 77 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ.
ಇನ್ನು ತಂಡವನ್ನ ಗೆಲುವಿನ ದಡ ತಲುಪಿಸುವ ಹೊತ್ತಿನಲ್ಲಿ 92 ಎಸೆತಗಳಲ್ಲಿ 136 ರನ್ ಸಿಡಿಸಿದ ಬೈಸ್ಟ್ರೋವ್ ವಿಕೆಟ್ ಒಪ್ಪಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಏಳು ಅಮೋಘ ಸಿಕ್ಸರ್‌ಗಳಿದ್ದವು.
ಇನ್ನು ಬೈಸ್ಟ್ರೋವ್‌ಗೆ ಉತ್ತಮ ಸಾಥ್ ನೀಡಿದ ನಾಯಕ ಬೆನ್‌ಸ್ಟೋಕ್ಸ್ 70 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಬೆನ್ ಸ್ಟೋಕ್ಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 4 ಬೌಂಡರಿಗಳಿದ್ದವು.
50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 299ರನ್‌ಗಳ ಗುರಿ ಮುಟ್ಟಿದ ಇಂಗ್ಲೆಂಡ್ ಐದು ವಿಕೆಟ್‌ಗಳ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಒಂದು ಹಂತದಲ್ಲಿ ಇಂಗ್ಲೆಂಡ್ ಗುರಿ ಬೆನ್ನತ್ತಿದ್ದಾಗ 4 ವಿಕೆಟ್ ನಷ್ಟಕ್ಕೆ 93ರನ್ ಕಲೆಹಾಕಿತ್ತು. ಆದ್ರೆ ಜಾನಿ ಬೈಸ್ಟ್ರೋವ್ ಮತ್ತು ನಾಯಕ ಬೆನ್‌ಸ್ಟೋಕ್ಸ್ ಪಂದ್ಯದ ಗತಿಯನ್ನೇ ಬದಲಿಸಿ ನ್ಯೂಜಿಲೆಂಡ್ ತಂಡದಿಂದ ಗೆಲುವನ್ನ ಕಸಿದುಕೊಂಡರು.