
ನ್ಯೂಜಿಲೆಂಡ್‌ನ ಮೌಂಟ್ ಮಂಗನುಯಿಯ ಬೇ ಒವಲ್‌ನಲ್ಲಿ ನಡೆಯುತ್ತಿರುವ ಆತಿಥೇಯರ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಸನಿಹದಲ್ಲಿದೆ.
ಮೊದಲನೇ ಟೆಸ್ಟ್ ಮೂರನೇ ದಿನದಾಂತ್ಯದ ವೇಳೆಗೆ ನ್ಯೂಜಿಲೆಂಡ್ 63 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನ್ಯೂಜಿಲೆಂಡ್ ಪಂದ್ಯದಲ್ಲಿ ಗೆಲ್ಲಬೇಕೆಂದರೆ ಇನ್ನೂ 331 ರನ್ ಗಳಿಸಬೇಕಿದೆ, ಡ್ರಾ ಮಾಡಿಕೊಳ್ಳಲು ಎರಡು ದಿನ ಬ್ಯಾಟಿಂಗ್ ಮಾಡಬೇಕಿದೆ.
19 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿತು. ಹ್ಯಾರಿ ಬ್ರೂಕ್, ಜೋ ರೂಟ್, ಬೆನ್ ಫೋಕ್ಸ್ ತಲಾ ಅರ್ಧಶತಕ ಗಳಿಸಿ ಮಿಂಚಿದರು.
ಒಲೀ ಪೋಪ್ 49 ರನ್ ಗಳಿಸಿದರು. ನಾಯಕ ಬೆನ್ ಸ್ಟೋಕ್ಸ್ 33 ಎಸೆತಗಳಲ್ಲಿ 31 ರನ್ ಗಳಿಸಿದರು. ಅಂತಿಮವಾಗಿ 374 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 389 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಬ್ರೇಸ್‌ವೆಲ್ ಮತ್ತು ಟಿಕ್ನರ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ವ್ಯಾಗ್ನರ್ ಮತ್ತು ಕುಗ್ಗೆಲಿನ್ ತಲಾ 2 ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ಸ್ಟುವರ್ಟ್ ಬ್ರಾಡ್ ಮಾರಕ ಬೌಲಿಂಗ್
ನಂತರ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ಗೆ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಆಘಾತ ನೀಡಿದರು. ನ್ಯೂಜಿಲೆಂಡ್ 14 ರನ್ ಗಳಿಸಿದ್ದಾಗ ಆರಂಭಿಕ ಆಟಗಾರ ಡಿವೋನ್ ಕಾನ್ವೆ ಅವರನ್ನು ಬೌಲ್ಡ್ ಮಾಡುವ ಮೂಲಕ ನ್ಯೂಜಿಲೆಂಡ್‌ಗೆ ಮೊದಲ ಶಾಕ್ ನೀಡಿದರು.
ನಂತರ ಪ್ರಮುಖ ಬ್ಯಾಟರ್ ಕೇನ್ ವಿಲಿಯಮ್ಸ್‌ರನ್ನು ಶೂನ್ಯಕ್ಕೆ ಔಟ್ ಮಾಡಿದ ಬ್ರಾಡ್ ಇಂಗ್ಲೆಂಡ್ ಮೇಲುಗೈ ಸಾಧಿಸಲು ಸಹಕಾರಿಯಾದರು. ಟಾಮ್ ಲಥಮ್ ಕೂಡ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು.

ಸೋಲಿನ ಸುಳಿಯಲ್ಲಿ ನ್ಯೂಜಿಲೆಂಡ್
ಮತ್ತೊಬ್ಬ ವೇಗಿ ರಾಬಿನ್‌ಸನ್ ಹೆನ್ರಿ ನಿಕೋಲಸ್ ಅವರ ವಿಕೆಟ್ ಪಡೆದು ಬ್ರಾಡ್‌ಗೆ ಸಾಥ್ ನೀಡಿದು. ಮತ್ತೆ ದಾಳಿಗೆ ಇಳಿದ ಬ್ರಾಡ್ ಟಾಮ್ ಬ್ಲಂಡೆಲ್‌ರನ್ನು ಬೌಲ್ಡ್ ಮಾಡಿದರು. ಬ್ರಾಡ್ ನಾಲ್ಕು ವಿಕೆಟ್‌ಗಳನ್ನು ಬೌಲ್ಡ್ ಮಾಡಿದ್ದು ವಿಶೇಷ.
ದಿನದ ಅಂತ್ಯಕ್ಕೆ ಡೇರಿಲ್ ಮಿಚೆಲ್ ಅಜೇಯ 13 ರನ್ ಗಳಿಸಿದ್ದು 4ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಮೈಕೆಲ್ ಬ್ರೇಸ್‌ವೆಲ್ ಕೂಡ ಅಜೇಯ 25 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ಗೆಲುವಿಗೆ 331 ರನ್ ಗಳಿಸಬೇಕಿದೆ.
ನಾಲ್ಕನೇ ದಿನವೇ ನ್ಯೂಜಿಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಸರಣಿಯಲ್ಲಿ ಮುನ್ನಡೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ ಇಂಗ್ಲೆಂಡ್ ಪಡೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ಫೆಬ್ರವರಿ 24ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.