
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ನಡೆಯುತ್ತಿದ್ದು ಆತಿಥೇಯ ಪಾಕಿಸ್ತಾನ ತಂಡಕ್ಕೆ ಕೋವಿಡ್ ಆಘಾತ ನೀಡಿದೆ. ತಂಡದ ಯುವ ಆಟಗಾರ ನಸೀಮ್ ಶಾ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದ ನಸೀಮ್ ಶಾ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಐಸೊಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಕ್ ತಂಡದ ಯುವ ಆಟಗಾರನ ಬಗ್ಗೆ ಪಿಸಿಬಿ ಮಾಹಿತಿ ನೀಡಿದ್ದು ನಸೀಮ್ ಶಾ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ ಎಂದಿದ್ದಾರೆ. ಅಲ್ಲದೆ ಕೋವಿಡ್ ನಿಯಮಗಳನ್ನು ಅವರು ಪಾಲಿಸುತ್ತಿದ್ದು ತಂಡದ ಹೋಟೆಲ್‌ಗೆ ಮರಳಲಿದ್ದಾರೆ ಎಂದು ಕೂಡ ಪಿಸಿಬಿ ತಿಳಿಸಿದೆ. ನಸೀಮ್ ಶಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರವೇ ಕರಾಚಿಯಲ್ಲಿ ಆಡಿದ್ದರು. ಬಳಿಕ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿತ್ತು. 7 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ಸಾ ನಾಲ್ಕು ಓವರ್‌ಗಳಲ್ಲಿ 41 ರನ್ ನೀಡಿ ಯಾವುದೇ ವಿಕೆಟ್ ಪಡೆಯದೆ ದುಬಾರಿಯೆನಿಸಿದ್ದರು. ಈ ಪಂದ್ಯವನ್ನು ಇಂಗ್ಲೆಂಡಗ 6 ವಿಕೆಟ್‌ಗಳಿಂದ ಗೆದ್ದಿತ್ತು.
ಕಳೆದ ಮಂಗಳವಾರ ಜ್ವರದಿಂದ ಬಳಲುತ್ತಿದ್ದ ನಸೀಮ್ ಶಾ ಲಾಹೋರ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಕೊರೊನಾವೈರಸ್ ಪರೀಕ್ಷೆಯನ್ನು ಕೂಡ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಯುವ ವೇಗಿಗೆ ಕೋವಿಡ್ 19 ದೃಢಪಟ್ಟಿದೆ.
ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರಾ ನಸೀಮ್ ಶಾ: ಇಂಗ್ಲೆಂಡ್ ವಿರುದ್ಧದ ಏಳು ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬಳಿಕ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಸರಣಿಯಲ್ಲಿ ಭಾಗಿಯಾಗಲಿದ್ದು ಬಾಂಗ್ಲಾದೇಶ ತಂಡ ಕೂಡ ಮುಖಾಮುಖಿಯಾಗಲಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮುನ್ನಡೆ ಸಾಧಿಸಿದ ಪಾಕ್: ಇನ್ನು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 7 ಪಂದ್ಯಗಳ ಸುದೀರ್ಘ ಟಿ20 ಸರಣಿಯಲ್ಲಿ ಐದು ಪಂದ್ಯಗಳು ಮುಕ್ತಾಯವಾಗಿದೆ. ಇದರಲ್ಲಿ ಪಾಕಿಸ್ತಾನ ತಂಡ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇಂಗ್ಲೆಂಡ್ ಎರಡರಲ್ಲಿ ಜಯಿಸಿದೆ. ಅಂತಿಮ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಯಾವ ತಂಡ ಗೆದ್ದು ಸರಣಿ ವಶಕ್ಕೆ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.