ನಾಯಕ ಶಾಯ್ ಹೋಪ್ ಅವರ ಅಜೇಯ ಶತಕದಿಂದಾಗಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಇದು ವೆಸ್ಟ್ ಇಂಡೀಸ್ ಕ್ರಿಕೆಟ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ರನ್ ಚೇಸ್ ಆಗಿದೆ.
ಇದಕ್ಕೂ ಮೊದಲು 2019 ರಲ್ಲಿ ಮಲಾಹೈಡ್‌ನಲ್ಲಿ ಐರ್ಲೆಂಡ್ ವಿರುದ್ಧ ಚೇಸಿಂಗ್ ಮಾಡುವಾಗ ಕೆರಿಬಿಯನ್ ತಂಡ 5 ವಿಕೆಟ್‌ಗೆ 331 ರನ್ ಗಳಿಸಿತ್ತು.

ಆ್ಯಂಟಿಗುವಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆರಿಬಿಯನ್ ಇಂಗ್ಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ವೆಸ್ಟ್ ಇಂಡೀಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 325 ರನ್ ಗಳಿಸಿತ್ತು. 326 ರನ್ ಗಳ ಗುರಿ ಬೆನ್ನತ್ತಿದ ಕೆರಿಬಿಯನ್ ತಂಡ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 4 ವಿಕೆಟ್ ಗಳ ಜಯ ಸಾಧಿಸಿತು.
ಇಂಗ್ಲೆಂಡ್ ಪರ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿಲ್ ಜಾಕ್ವೆಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇವರಿಬ್ಬರು 5.4 ಓವರ್‌ಗಳಲ್ಲಿ 50 ರನ್ ಗಳಿಸಿದರು. ಗುಡಾಕೇಶ್ ಮೋತಿ 8.2 ಓವರ್‌ನಲ್ಲಿ ಇಂಗ್ಲೆಂಡ್ ಗೆ ಮೊದಲ ಪೆಟ್ಟು ನೀಡಿದರು.
ಇಂಗ್ಲೆಂಡ್ ಮಿಡ್ಲ್ ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಡೆತ್ ಓವರ್‌ಗಳಲ್ಲಿ 89 ರನ್ ಸಿಡಿಸಿತು.
ಇಂಗ್ಲೆಂಡ್ ಪರ ನಾಲ್ಕನೇ ವಿಕೆಟ್‌ಗೆ ಜಾಕ್ ಕ್ರೌಲಿ ಮತ್ತು ಹ್ಯಾರಿ ಬ್ರೂಕ್ 54 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿದರು.ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ ಗರಿಷ್ಠ 71, ಜ್ಯಾಕ್ ಕ್ರೌಲಿ 48 ರನ್ ಗಳಿಸಿದರು.
ವೆಸ್ಟ್ ಇಂಡೀಸ್ ಪರ ಮೋತಿ, ಥಾಮಸ್, ಶೆಫರ್ಡ್ ತಲಾ ಎರಡು ವಿಕೆಟ್ ಪಡೆದರು.
326 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಕೆರಿಬಿಯನ್ ತಂಡ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿತು. ಆರಂಭಿಕ ಆಟಗಾರ ಅಲೆಕ್ ಅತಾನಾಜೆ 17.3 ಓವರ್‌ಗಳಲ್ಲಿ ರೆಹಾನ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು. ಅತಾನಾಜೆ 65 ಎಸೆತಗಳಲ್ಲಿ 66 ರನ್ ಗಳಿಸಿದರು.
ವೆಸ್ಟ್ ಇಂಡೀಸ್ ಪರ ನಾಯಕ ಶಾಯಿ ಹೋಪ್ 83 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿ ಅಬ್ಬರಿಸಿದರು. 49ನೇ ಓವರ್ ನಲ್ಲಿ ಶಾಯ್ 3 ಸಿಕ್ಸರ್ ಬಾರಿಸಿದರು.
ಶಾಯ್ ಹೋಪ್‌ಗೆ ರೊಮಾರಿಯೊ ಶೆಫರ್ಡ್ 48 ರನ್ ಮತ್ತು ಶಿಮ್ರಾನ್ ಹೆಟ್ಮೆಯರ್ 32 ರನ್ ಉತ್ತಮ ಸಾಥ್ ನೀಡಿದರು.