ಚಾಂಪಿಯನ್ಸ್ ಟ್ರೋಫಿ 2025ರ ಬಿ ಗುಂಪಿನಲ್ಲಿ ಬುಧವಾರ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೆ ತಮ್ಮ ಸೆಮಿಸ್‌ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲೆಲ್ಲೇಬೇಕಾಗಿದೆ. ಹೀಗಾಗಿ ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈಗಾಗಲೇ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಆಡಿರುವ ಒಂದೊಂದು ಪಂದ್ಯಗಳಲ್ಲಿ ಸೋಲು ಕಂಡಿವೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಬಿ ಗುಂಪಿನಲ್ಲಿ ತಲಾ ಎರಡು ಅಂಕಗಳನ್ನು ಗಳಿಸಿದ್ದು, ಎರಡೂ ತಂಡಗಳಿಗೆ ಸೆಮಿಫೈನಲ್ ತಲುಪುವ ಅವಕಾಶಗಳು ಹೆಚ್ಚಿವೆ.
ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಇತ್ತೀಚೆಗೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 350 ಕ್ಕೂ ಹೆಚ್ಚು ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಕೆಲವು ಸುಧಾರಣೆಗಳ ಅಗತ್ಯವಿದೆ.

ಅಫ್ಘಾನಿಸ್ತಾನ ತಂಡ ರಶೀದ್ ಖಾನ್, ನೂರ್ ಅಹ್ಮದ್ ಮತ್ತು ಮೊಹಮ್ಮದ್ ನಬಿ ಅವರ ಸ್ಪಿನ್ ತ್ರಿವಳಿಗಳನ್ನು ಹೊಂದಿದೆ. ಈ ತ್ರಿವಳಿ ಸ್ಪಿನ್ನರ್‌ಗಳು ಎದುರಾಳಿ ಇಂಗ್ಲೆಂಡ್ ತಂಡವನ್ನು ಕಾಡಬಹುದು. ಸ್ಪಿನ್ ಬೌಲಿಂಗ್ ವಿರುದ್ಧ ಇಂಗ್ಲೆಂಡ್‌ನ ಇತ್ತೀಚಿನ ಪ್ರದರ್ಶನ ಉತ್ತಮವಾಗಿಲ್ಲ. ಅಫ್ಘಾನಿಸ್ತಾನ ತಂಡವು ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 107 ರನ್‌ಗಳ ಹೀನಾಯ ಸೋಲನ್ನು ಎದುರಿಸಿತ್ತು. ಅಫ್ಘಾನ್ ತಂದದಲ್ಲಿ ಪೈಪೋಟಿ ನೀಡಬಲ್ಲ ಆಟಗಾರರಿದ್ದಾರೆ. ಆದರೆ ಇಂಗ್ಲೆಂಡ್ ತಂಡಕ್ಕೆ ಸವಾಲು ಹಾಕಲು ಸ್ಥಿರ ಪ್ರದರ್ಶನ ನೀಡಬೇಕಾಗಿದೆ.
ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಮೂರು ಐಸಿಸಿ ಏಕದಿನ ಟೂರ್ನಿಗಳಲ್ಲಿ ಕಾದಾಟ ನಡೆಸಿವೆ. ಈ ಸಂದರ್ಭಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ಪ್ರಾಬಲ್ಯ ಸಾಧಿಸಿದೆ. ಆದರೆ ಇಂಗ್ಲೆಂಡ್ ತಂಡದ ಎದುರು ಗೆಲುವಿಗಾಗಿ ಅಫ್ಘಾನಿಸ್ತಾನ ಪ್ರಬಲ ಪೈಪೋಟಿ ನಡೆಸಿದೆ. ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಅಫ್ಘಾನಿಸ್ತಾನ 69 ರನ್‌ಗಳಿಂದ ಸೋಲಿಸಿತ್ತು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡವನ್ನು ಇಂಗ್ಲೆಂಡ್ 2019ರ ಏಕದಿನ ವಿಶ್ವಕಪ್ ಮತ್ತು 2015 ಏಕದಿವ ವಿಶ್ವಕಪ್ ಟೂರ್ನಿಗಳಲ್ಲಿ ಸೋಲಿಸಿದೆ.
ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಜದ್ರಾನ್, ರಹಮಾನಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಸೆಡಿಕುಲ್ಲಾ ಅಟಲ್, ರಹಮತ್ ಶಾ, ಇಕ್ರಮ್ ಅಲಿಖಿಲ್, ಗುಲ್ಬಾದಿನ್ ನೈಬ್, ಅಜ್ಮತುಲ್ಲಾ ಒಮರ್ಜೈ, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಫರೀದ್ ಮಲಿಕ್, ನವೀದ್ ಜದ್ರಾನ್.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್‌ಕೀಪರ್), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್, ರೆಹಾನ್ ಅಹ್ಮದ್, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ಸಾಲ್ಟ್, ಮಾರ್ಕ್ ವುಡ್.