
ಲಂಡನ್, ಮೇ 15: ಪ್ರವಾಸಿ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಮಂದಗತಿಯ ಬೌಲಿಂಗ್ ಪ್ರಮಾದ ಎಸಗಿದ ಪರಿಣಾಮ ಇಂಗ್ಲೆಂಡ್ ತಂಡದ ನಾಕಯ ಐಯಾನ್ ಮಾರ್ಗನ್‌ಗೆ 4ನೇ ಪಂದ್ಯದಲ್ಲಿ ಆಡದೇ ಇರುವಂತೆ ನಿಷೇಧ ಹೇರಲಾಗಿದೆ.
ಇದರೊಂದಿಗೆ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿರುವ ಇಂಗ್ಲೆಂಡ್ ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು, ನಾಲ್ಕನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನನ್ನು ನೇಮಕ ಮಾಡಬೇಕಿದೆ.
ಮಂಗಳವಾರ ಬ್ರಿಸ್ಟೋಲ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಆದರೆ, ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಎದುರು 50 ಓವರ್‌ಗಳನ್ನು ಎಸೆಯಲು ಇಂಗ್ಲೆಂಡ್ ತಂಡ 4 ಗಂಟೆಗಳ ಸಮಯ ತೆಗೆದುಕೊಂಡ ಪರಿಣಾಮ ಮಾರ್ಗನ್‌ಗೆ ಒಂದು ಪಂದ್ಯ ನಿಷೇಧ ಶಿಕ್ಷೆ ಎದುರಿಸುವಂತಾಗಿದೆ.
ನಿಷೇಧ ಅಲ್ಲದೆ ಪಂದ್ಯದ ಸಂಭಾವನೆ ಶೇ. 20 ರಷ್ಟು ದಂಡ ತೆರುವಂತೆ ಮ್ಯಾಚ್ ರೆಫ್ರಿ ರಿಚೀ ರಿಚರ್ಡ್ಸನ್ ಸೂಚಿಸಿದ್ದಾರೆ. ಇಂಗ್ಲೆಂಡ್ ತಂಡ ನಿಗಧಿತ ಅವಧಿ ಮುಕ್ತಾಯದ ಹೊತ್ತಿಗೆ ಇನ್ನೂ ಎರಡು ಓವರ್‌ಗಳನ್ನು ಎಸೆಯಬೇಕಿತ್ತು.
ಕಳೆದ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬೆಡೋಸ್‌ನಲ್ಲಿ ನಡೆದ ಪಂದ್ಯದಲ್ಲೂ ಮಾರ್ಗನ್, ಇದೇ ರೀತಿಯ ತಪ್ಪು ಮಾಡಿದ್ದ ಪರಿಣಾಮ ಇದೀಗ ದಂಡದ ಜೊತೆಗೆ ಒಂದು ಪಂದ್ಯ ನಿಷೇಧ ಶಿಕ್ಷೆಯನ್ನೂ ಎದುರಿಸುವಂತಾಗಿದೆ. 12 ತಿಂಗಳ ಒಳಗಾಗಿ ಎರಡನೇ ಬಾರಿ ಮಂದಗತಿಯ ಬೌಲಿಂಗ್ ಪ್ರಮಾದ ನಡೆದ ಒಂದು ಪಂದ್ಯ ನಿಷೇಧ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ.