ಕೋಲ್ಕತ್ತಾ: ಭರವಸೆಯ ಬ್ಯಾಟರ್ ವಿಲ್ ಜಾಕ್ಸ್ ಬಾರಿಸಿದ ಅರ್ಧಶತಕ ಹಾಗೂ ಜೆಮಿ ಓವರ್‌ಟನ್ ಅವರ ಬಿಗುವಿನ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಇಟಲಿ ವಿರುದ್ಧ 24 ರನ್ ಜಯ ಸಾಧಿಸಿದ್ದು, ಮುಂದಿನ ಹಂತದ ಆಸೆ ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ 3 ರನ್ ಬಾರಿಸಿ ಔಟ್ ಆದರು. ಆರಂಭಿಕ ಆಟಗಾರ ಫಿಲ್ ಸಾಲ್ಟ್ 28 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಜಾಕಬ್ ಬೆಥೆಲ್ 23 ರನ್ ಸಿಡಿಸಿ ಔಟ್ ಆದರು.

ಕಳೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಟ್ಯಾಮ್ ಬಾಟಮ್ 30 ರನ್ ಸಿಡಿಸಿದರು. ನಾಯಕ ಹ್ಯಾರಿ ಬ್ರೂಕ್ 14 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಆಲ್‌ರೌಂಡರ್ ಸ್ಯಾಮ್ ಕರನ್ (25) ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಲ್ ಜಾಕ್ಸ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 240ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಜಾಕ್ಸ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರು. ಇವರು ಕ್ಲಾಸ್ ಆಟದ ನೆರವಿನಿಂದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202 ರನ್ ಸೇರಿಸಿತು.
ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡದ ಆರಂಭಿಕ ಆಟಗಾರ ಜಸ್ಟಿನ್ ಮೊಸ್ಕಾ ಜವಾಬ್ದಾರಿಯುತ ಆಟವಾಡಿದರು. ಇವರು ನಾಲ್ಕನೇ ವಿಕೆಟ್‌ಗೆ ಬೆನ್ ಮಾನೆಂಟಿ ಜೊತೆಗೂಡಿ 48 ಎಸೆತಗಳಲ್ಲಿ 92 ರನ್ ಸಿಡಿಸಿದರು. ಬೆನ್ ಮಾನೆಂಟಿ 4 ಬೌಂಡರಿ, 5 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿ ಇಂಗ್ಲೆಂಡ್ ಬಲಿಷ್ಠ ಬೌಲಿಂಗ್ ಪಡೆಗೆ ಸವಾಲು ಎಸೆದರು. ಮಧ್ಯಮ ಕ್ರಮಾಂಕದಲ್ಲಿ ಗ್ರಾಂಟ್ ಸ್ಟೀವರ್ಟ್ 45 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಇಟಲಿ 178 ರನ್‌ಗಳಿಗೆ ಸರ್ವಪತನವಾಯಿತು. ಈ ಜಯದ ಮೂಲಕ ಇಂಗ್ಲೆಂಡ್ ಆಡಿದ 4 ಪಂದ್ಯಗಳಲ್ಲಿ 3 ಜಯ, 1 ಸೋಲು ಕಂಡಿದ್ದು, 6 ಅಂಕವನ್ನು ಕಲೆ ಹಾಕಿದ್ದು, ಮುಂದಿನ ಹಂತಕ್ಕೆ ಒಂದು ಕಾಲು ಇಟ್ಟಿದೆ.
ಇದಕ್ಕೂ ಮೊದಲು ಯುಎಇ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡ್ ಮಾಡಲು ಮುಂದಾಯಿತು. ಯುಎಇ ಪರ ಅಲಿಶಾನ್ ಶರಫು 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 40 ರನ್ ಸಿಡಿಸಿದರು. ಸೊಹೈಬ್ ಖಾನ್ 48 ಎಸೆತಗಳಲ್ಲಿ 68 ರನ್ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 6 ಬೌಂಡರಿ, 4 ಸಿಕ್ಸರ್ ಸೇರಿವೆ. ಅಂತಿಮವಾಗಿ ಯುಎಇ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡದ ರಹಮದುಲ್ಲಾ ಗುರ್ಬಾಜ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇಬ್ರಾಹಿಂ ಜರ್ದಾನ್ 41 ಎಸೆತಗಳಲ್ಲಿ 53 ರನ್ ಸಿಡಿಸಿದರು. ಈ ಇನಿಂಗ್ಸ್‌ನಲ್ಲಿ 6 ಬೌಂಡರಿ, 1 ಸಿಕ್ಸರ್ ಸೇರಿವೆ. ದರ್ವಿಶ್ ರಸೂಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿದರು. ಅಜ್ಮತುಲ್ಲಾ ಒಮರ್ಜಾಯ್ 21 ಎಸೆತಗಳಲ್ಲಿ 40 ರನ್ ಬಾರಿಸಿ ಮಿಂಚಿದರು. ಅಫ್ಘಾನಿಸ್ತಾನ ತಂಡ ಅಂತಿಮವಾಗಿ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್ ಸೇರಿಸಿತು.