
ಬೆಂಗಳೂರು, ಜುಲೈ 5: ಕುಲದೀಪ್ ಸಿಂಗ್ ಬೌಲಿಂಗ್ ದಾಳಿ ಮತ್ತು ಕೆ.ಎಲ್. ರಾಹುಲ್ ಅವರ ಅಬ್ಬರದ ಶತಕದ ಆಟದಿಂದ ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದ್ದರೂ, ಅಂದು ಇಂಗ್ಲೆಂಡ್ ಕ್ರಿಕೆಟಿಗರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು.
ಆಗಷ್ಟೇ ಕ್ರಿಕೆಟ್‌ನಲ್ಲಿ ಸೋತು ಸುಣ್ಣವಾಗಿ ಬೇಸರದ ಮೊರೆ ಹೊತ್ತು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದ ಇಂಗ್ಲೆಂಡ್ ಕ್ರಿಕೆಟಿಗರಿಗೆ ಖುಷಿ ನೀಡುವ ಸಂಗತಿಯೊಂದು ಎದುರಾಗಿತ್ತು. ಹೀಗಾಗಿ ತಮಗೆದುರಾದ ಸೋಲಿನ ಕಹಿಯನ್ನು ಮರೆತು ಸಂಭ್ರಮಿಸಲು ಕಾರಣವಿತ್ತು.

ಅದೇ ದಿನ ನಡೆದ ಫೀಫಾ ವಿಶ್ವಕಪ್ ಫುಟ್ಬಾಲ್‌ನ 16ರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೊಲಂಬಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3ರಿಂದ ಗೆಲುವು ಸಾಧಿಸಿತು.
ಕ್ರಿಕೆಟ್‌ನಷ್ಟೇ ಫುಟ್ಬಾಲ್ ಪ್ರೀತಿಯೂ ಹೆಚ್ಚಿರುವ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ನ ಸೋಲು ಗೌಣವಾಯಿತು. ಫುಟ್ಬಾಲ್ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತು.
ಡ್ರೆಸ್ಸಿಂಗ್ ರೂಮ್‌ನಲ್ಲಿ ಸೇರಿದ್ದ ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಸೋಲಿನ ನೋವು ಕಾಡುತ್ತಿದ್ದರೆ, ಇನ್ನೊಂದೆಡೆ ಫುಟ್ಬಾಲ್‌ನಲ್ಲಿ ಏನಾಗಲಿದೆ ಎಂಬ ಕಾತರ. ಕೊನೆಗೆ ಇಲ್ಲಿನ ಸೋಲನ್ನು ಮರೆಸುವಂತೆ ಫುಟ್ಬಾಲ್ ಆಟಗಾರರು ಗೆಲುವು ತಂದಿತ್ತರು.
ಟಿವಿ ಮುಂದೆ ಸೇರಿದ್ದ ಕ್ರಿಕೆಟಿಗರು ಜೋರಾಗಿ ಹಾಡು ಹೇಳುತ್ತಾ ಕುಣಿದು ಕುಪ್ಪಳಿಸಿದರು.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದ ದಿನವೇ ಇಂಗ್ಲೆಂಡ್ ಫುಟ್ಬಾಲ್ ತಂಡ ಪನಾಮ ವಿರುದ್ಧ ಪಂದ್ಯವಾಡಿತ್ತು. ಅಂದು ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವಿನ ಸವಿ ಉಂಡಿತ್ತು.
ಇದೇ ರೀತಿ ಭಾರತದ ವಿರುದ್ಧವೂ ಇಂಗ್ಲೆಂಡ್ ಗೆಲ್ಲಲಿದೆ. ಕೊಲಂಬಿಯಾ ವಿರುದ್ಧ ಫುಟ್ಬಾಲ್ ತಂಡ ಗೆಲ್ಲಲಿದೆ ಎಂದು ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಫುಟ್ಬಾಲ್‌ನಲ್ಲಿ ಗೆಲುವು ಸಿಕ್ಕರೂ, ಕ್ರಿಕೆಟ್‌ನಲ್ಲಿ ಹೀನಾಯ ಸೋಲು ಎದುರಾಯಿತು.