ಸಚಿನ್ ದಾಖಲೆ ಮುರಿಯುವ ಅವಕಾಶ ಜೋ ರೂಟ್‌ಗೆ ಇದೆ: ಮೈಕಲ್ ವಾನ್ ಪ್ರತಿಕ್ರಿಯೆ

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಜೋ ರೂಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ ಜೋ ರೂಟ್ 10000 ರನ್‌ಗಳ ಮೈಲಿಗಲ್ಲು ದಾಟಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಜೋ ರೂಟ್ ಮುರಿಯುವ ಎಲ್ಲಾ ಅವಕಾಶಗಳು ಇದೆ ಎಂದಿದ್ದಾರೆ.
ಅಲೆಸ್ಟರ್ ಕುಕ್ ಬಳಿಕ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಎರಡನೇ ಆಟಗಾರನಾಗಿದ್ದು ಒಟ್ಟಾರೆಯಾಗಿ ಈ ಸಾಧನೆ ಮಾಡಿದ 14ನೇ ಕ್ರಿಕೆಟಿಗನಾಗಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಸಿಡಿಸಿದ ಈ ಶತಕದ ಕಾರಣದಿಂದಾಗಿ ಇಂಗ್ಲೆಂಡ್ ಪಡೆ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
"ನನ್ನ ಪ್ರಕಾರ ಇಂಗ್ಲೆಂಡ್‌ನ ಶ್ರೇಷ್ಠ ಆಟಗಾರ ಜೋ ರೂಟ್. ಈಗ ಅವರ ಚಿತ್ತ ಸಚಿನ್ ತೆಂಡೂಲ್ಕರ್ ಮೇಲಿದೆ. ನನ್ನ ಪ್ರಕಾರ ಜೋ ರೂಟ್ ಇಂಗ್ಲೆಂಡ್ ಕಂಡ ಸರ್ವಶ್ರೇಷ್ಠ ಆಟಗಾರ ಗ್ರಹಾಂ ಗೂಚ್ ಅವರ ಸಾಲಿನಲ್ಲಿ ಸೇರಿಕೊಳ್ಳುತ್ತಾರೆ. ಅವರು ಹೀಗೆಯೇ ಮುಂದುವರಿದರೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಅತಿ ಹೆಚ್ಚಿನ ಟೆಸ್ಟ್ ರನ್‌ಗಳ ದಾಖಲೆಯನ್ನು ಮುಂದುವರಿಯಲಿದ್ದಾರೆ" ಎಂದು ದಿ ಟೆಲಿಗ್ರಾಫ್‌ಗೆ ಬರೆದ ಅಂಕಣದಲ್ಲಿ ಮೈಕಲ್ ವಾನ್ ಉಲ್ಲೇಖಿಸಿದ್ದಾರೆ.

ಸಚಿನ್ ದಾಖಲೆ ಮುರಿಯಬಲ್ಲರು
"ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಗಿಂತ ಜೋ ರೂಟ್ 6000 ರನ್‌ಗಳಷ್ಟು ಹಿಂದಿದ್ದಾರೆ ನಿಜ. ಆದರೆ ಅವರ ವಯಸ್ಸು ಇನ್ನೂ 31 ವರ್ಷ. ಜೇಮ್ಸ್ ಆಂಡರ್ಸನ್ 40 ವರ್ಷದವರೆಗೆ ಆಡಲು ಸಾಧ್ಯವಿದೆ ಎಂದರೆ ಜೋ ರೂಟ್‌ಗೆ ಕೂಡ ಅದು ಸಾಧ್ಯವಿದೆ. ಅವರು ಬ್ಯಾಟಿಂಗ್ ಮಾಡುವುದನ್ನು ಅಷ್ಟು ಇಷ್ಟಪಡುತ್ತಾರೆ" ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಮೈಕಲ್ ವಾನ್.

ರೂಟ್ ಅದ್ಭುತ ಫಾರ್ಮ್
ಜೋ ರೂಟ್ 2021ರಲ್ಲಿ ಅದ್ಭುತ ಟೆಸ್ಟ್ ಪ್ರದರ್ಶನ ನೀಡಿದ್ದರು. ತಂಡದ ಕಳಪೆ ಪ್ರದರ್ಶನದ ಹೊರತಾಗಿಯೂ 15 ಪಂದ್ಯಗಳನ್ನು ಆಡಿದ್ದ ಜೋ ರೂಟ್ 61ರ ಸರಾಸರಿಯಲ್ಲಿ 1708 ರನ್ ಗಳಿಸಿದ್ದರು. ಈ ವರ್ಷದಲ್ಲಿ ಕೂಡ ಆ ಫಾರ್ಮ್‌ಅನ್ನು ರೂಟ್ ಮುಂದುವರಿಸಿದ್ದಾರೆ

ರೋಚಕ ಪಂದ್ಯ ಗೆದ್ದ ಇಂಗ್ಲೆಂಡ್
ಇನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕವಾಗಿ ಗೆಲುವು ಸಾಧಿಸಿದೆ. ಬೌಲರ್‌ಗಳು ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ ಈ ಪಂದ್ಯದಲ್ಲಿ ಕೆಲ ಬ್ಯಾಟರ್‌ಗಳ ನಿರ್ಣಾಯಕ ಪಾತ್ರದ ಕಾರಣದಿಂದಾಗಿ ರೋಚಕತೆಯನ್ನು ಸೃಷ್ಟಿಸಿತ್ತು. ಆದರೆ ಅಂತಿಮವಾಗಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿಲು ಯಶಸ್ವಿಯಾಗಿದ್ದು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 1-0 ಅಂತರದಿಂದ ಮೇಲುಗೈ ಸಾಧಿಸಿದೆ.

ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದ ಆಸಿಸ್ ಮಾಜಿ ನಾಯಕ
ಇನ್ನು ಜೋ ರೂಟ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಬಹುದು ಎಂದು ಆಸ್ಟ್ರೇಲುಯಾದ ಮಾಜಿ ನಾಯಕ ಮಾರ್ಕ್ ಟ್ರೈಲರ್ ಕೂಡ ಇತ್ತೀಚೆಗಷ್ಟೇ ಅಭಿಪ್ರಾಯವನ್ನು ವ್ಯಕ್ತಡಿಸಿದ್ದರು "ಜೋ ರೂಟ್‌ಗೆ ಇನ್ನೂ ಕನಿಷ್ಠ 5 ವರ್ಷಗಳ ಕಾಲ ಟೆಸ್ಟ್ ಆಡುವ ಅವಕಾಶವಿದೆ. ಹಾಗಾಗಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸುಲಭವಾಗಿ ರೂಟ್ ಮುರಿಯಬಹುದು. ಕಳೆದ 2 ವರ್ಷಗಳಲ್ಲಿ ರೂಟ್ ಅವರು ಹಿಂದೆಂದಿಗಿಂತಲೂ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಅತ್ಯುನ್ನತ ಫಾರ್ಮ್‌ನಲ್ಲಿ ಅವರಿದ್ದಾರೆ. ತಮ್ಮ ಫಿಟ್‌ನೆಸ್ ಉಳಿಸಿಕೊಂಡರೆ ಅವರು 15,000 ರನ್‌ಗಳನ್ನು ಸುಲಭವಾಗಿ ಗಳಿಸಲು ಸಾಧ್ಯವಿದೆ" ಎಂದಿದ್ದಾರೆ ಆಸಿಸ್ ತಂಡದ ಮಾಜಿ ನಾಯಕ ಮಾರ್ಕ್ ಟ್ರೈಲರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications