ಶನಿವಾರ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿತು.
ಈ ರೋಚಕ ಪಂದ್ಯದಲ್ಲಿ, ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅಜೇಯ ಶತಕ ಗಳಿಸಿ ಮಿಂಚಿದರು. ಹ್ಯಾರಿ ಬ್ರೂಕ್ ಉತ್ತಮವಾಗಿ ಆಡಿ ತಂಡಕ್ಕೆ ಜಯದ ಮಾಲೆ ತೊಡಿಸಿದರು.
ಈ ರೋಚಕ ಪಂದ್ಯದಲ್ಲಿ, ಇಂಗ್ಲೆಂಡ್‌ನ ಆರಂಭಿಕ ಫಿಲ್ ಸಾಲ್ಟ್ 56 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದರು ಮತ್ತು ಹ್ಯಾರಿ ಬ್ರೂಕ್ ಕೇವಲ 7 ಎಸೆತಗಳಲ್ಲಿ 31 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರು. ಪರಿಣಾಮ ಇಂಗ್ಲೆಂಡ್ 19.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಿ ಜಯ ಸಾಧಿಸಿತು. ಈ ಪಂದ್ಯದ ಸೋಲಿನ ನಂತರವೂ, ಈ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1 ರಿಂದ ಮುಂದಿದೆ.

ವೆಸ್ಟ್ ಇಂಡೀಸ್ ನೀಡಿದ್ದ 223 ರನ್ ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಶುಭಾರಂಭ ಮಾಡಿತ್ತು. ಫಿಲ್ ಸಾಲ್ಟ್ ಮತ್ತು ನಾಯಕ ಜೋಸ್ ಬಟ್ಲರ್ ನಡುವೆ ಕೇವಲ 11.2 ಓವರ್‌ಗಳಲ್ಲಿ 115 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಟ್ಲರ್ 34 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು ಮತ್ತು ಮುಂದಿನ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಕೇವಲ 1 ರನ್‌ಗೆ ವಿಲ್ ಜಾಕ್ವೆಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಲಿಯಾಮ್ ಲಿವಿಂಗ್‌ಸ್ಟನ್ ಕೂಡ 18 ಎಸೆತಗಳಲ್ಲಿ 30 ರನ್ ಗಳಿಸಿ ಇಂಗ್ಲೆಂಡ್‌ಗೆ ನೆರವಾದರು. ಸಾಲ್ಟ್ ಮತ್ತು ಬ್ರೂಕ್ ಜೋಡಿ ಕೊನೆಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಬೀಗಿತು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಆತಿಥೇಯ ವೆಸ್ಟ್ ಇಂಡೀಸ್‌ಗೆ ಆರಂಭಿಕ ಹೊಡೆತವನ್ನೂ ನೀಡಿದ್ದರು. ಆದರೆ ನಿಕೋಲಸ್ ಪೂರನ್ 45 ಎಸೆತಗಳಲ್ಲಿ 82 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಅನ್ನು 200 ದಾಟಿದರು.
ಪುರನ್ ಜೊತೆಗೆ ಶಾಯ್ ಹೋಪ್ 19 ಎಸೆತಗಳಲ್ಲಿ 26 ರನ್, ರೋವ್ಮನ್ ಪೊವೆಲ್ 21 ಎಸೆತಗಳಲ್ಲಿ 39 ರನ್, ಶೆರ್ಫೇನ್ ರುದರ್ಫೋರ್ಡ್ 17 ಎಸೆತಗಳಲ್ಲಿ 29 ರನ್, ಜೇಸನ್ ಹೋಲ್ಡರ್ 5 ಎಸೆತಗಳಲ್ಲಿ 18 ರನ್ ಗಳಿಸಿದರು. ಕೊನೆಯಲ್ಲಿ ಆತಿಥೇಯ ತಂಡಕ್ಕೆ ಬಿಗ್ ಹಿಟ್ ಬಾರಿಸುವ ನೆಪದಲ್ಲಿ ವಿಕೆಟ್ ಕೈ ಚೆಲ್ಲಿತು.