ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತನ್ನ ಕೆಟ್ಟ ಪ್ರದರ್ಶನವನ್ನು ಮುಂದುವರಿಸಿದೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ, ಟೀಕೆಗಳಿಗೆ ಗುರಿಯಾಗಿದ್ದ ಇಂಗ್ಲೆಂಡ್ ತಂಡ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಕಳೆದು ಕೊಂಡು ಪೆಟ್ಟು ತಿಂದಿತ್ತು. ಅಲ್ಲದೆ ಟಿ20 ಸರಣಿಯಲ್ಲೂ ಇಂಗ್ಲೆಂಡ್ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪರದಾಟ ನಡೆಸಿದೆ.
ಏಕದಿನ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಸೋಲು, ನಿಜಕ್ಕೂ ಇಂಗ್ಲೆಂಡ್ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಈಗ ಚುಟುಕು ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ ಗಳಿಂದ ವಿಂಡೀಸ್ ವಿರುದ್ಧ ಸೋಲು ಕಂಡಿತು.

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 171 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ವಿಂಡೀಸ್ 6 ವಿಕೆಟ್ ಕಳೆದುಕೊಂಡು ಇನ್ನು 11 ಎಸೆತ ಬಾಕಿ ಇರುವಂತೆ ಪಂದ್ಯವನ್ನು ಗೆದ್ದು ಬೀಗಿತು. ಈ ಗೆಲುವಿನ ಮೂಲಕ ವಿಂಡೀಸ್ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭ ಭರ್ಜರಿಯಾಗಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 6 ಓವರ್‌ಗಳಲ್ಲಿ 77 ರನ್ ಸೇರಿಸಿತು. ಫಿಲ್ ಸಾಲ್ಟ್ 20 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಇದಾದ ಬಳಿಕ ವಿಲ್ ಜಾಕ್ವೆಸ್ ಜತೆಗೂಡಿ ನಾಯಕ ಜೋಸ್ ಬಟ್ಲರ್ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದರು. ವಿಲ್ ಜಾಕ್ವೆಸ್ 9 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು ಮತ್ತು ನಂತರ ಜೋಸ್ ಬಟ್ಲರ್ ಕೂಡ 39 ರನ್‌ಗಳ ಇನ್ನಿಂಗ್ಸ್ ಕೊನೆಗೊಂಡಿತು.

ಬಟ್ಲರ್ ಔಟಾದ ಕೂಡಲೇ ಇಂಗ್ಲೆಂಡ್ ತಂಡ ಕುಸಿತ ಕಂಡಿತು. ಒಂದು ಹಂತದಲ್ಲಿ 10.4 ಓವರ್‌ಗಳಲ್ಲಿ 2 ವಿಕೆಟ್‌ಗೆ 117 ರನ್ ಸೇರಿಸಿತ್ತು. ಇಂಗ್ಲೆಂಡ್ ತನ್ನ ಕೊನೆಯ ಎಂಟು ವಿಕೆಟ್‌ಗಳನ್ನು 54 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ವೆಸ್ಟ್ ಇಂಡೀಸ್ ಪರ ಆಂಡ್ರೆ ರಸೆಲ್ ಮತ್ತು ಅಲ್ಜಾರಿ ಜೋಸೆಫ್ ತಲಾ ಮೂರು ವಿಕೆಟ್ ಪಡೆದರು. ರೊಮಾರಿಯೊ ಶೆಫರ್ಡ್ ಎರಡು ವಿಕೆಟ್ ಪಡೆದರು.
172 ರನ್‌ಗಳ ಗುರಿಯನ್ನು ವೆಸ್ಟ್ ಇಂಡೀಸ್ ಸಹ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸಲು ಆರಂಭಿಸಿದರು. ಬ್ರೆಂಡನ್ ಕಿಂಗ್ 12 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು ಮತ್ತು ಕೈಲ್ ಮೇಯರ್ಸ್ 21 ಎಸೆತಗಳಲ್ಲಿ 35 ರನ್ ಗಳಿಸಿದರು. ಶಾಯ್ ಹೋಪ್ ಮತ್ತು ನಿಕೋಲಸ್ ಪುರನ್ ಇನ್ನಿಂಗ್ಸ್ ಅನ್ನು ನಿಧಾನವಾಗಿ ಮುಂದಕ್ಕೆ ಕೊಂಡೊಯ್ದರು. ಪುರನ್ ಜವಾಬ್ದಾರಿ ಮರೆತರು. ಅವರ ನಂತರ ಶಿಮ್ರಾನ್ ಹೆಟ್ಮೆಯರ್ ಬಂದಷ್ಟೇ ವೇಗವಾಗಿ ಪೇವಿಲಿಯನ್ ಸೇರಿದರು. ವಿಂಡೀಸ್ 123 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಆಗ ವೆಸ್ಟ್ ಇಂಡೀಸ್ ಗೆಲುವಿಗೆ 32 ಎಸೆತಗಳಲ್ಲಿ 49 ರನ್ ಗಳ ಅಗತ್ಯವಿತ್ತು. ನಾಯಕ ರೋವ್‌ಮನ್ ಪೊವೆಲ್ (31) ಮತ್ತು ಆಂಡ್ರೆ ರಸೆಲ್ (29) 200 ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು ಮತ್ತು 21 ಎಸೆತಗಳಲ್ಲಿ 49 ರನ್‌ಗಳ ಅಜೇಯ ಜೊತೆಯಾಟವನ್ನು ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಆಂಡ್ರೆ ರಸೆಲ್ ಆಲ್‌ರೌಂಡರ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.