ವಿಂಡೀಸ್ ಸರಣಿಗೆ ಒಂದು ತಂಡದಲ್ಲಾದ್ರೂ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದೆ: ಗಿಲ್

ನವದೆಹಲಿ, ಜುಲೈ 23: ಯುವ ಕ್ರಿಕೆಟರ್ ಶುಭ್‌ಮಾನ್ ಗಿಲ್ ಬಹಳ ನಿರಾಶೆಯಲ್ಲಿದ್ದಾರೆ. ಆಗಸ್ಟ್ 3ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಾಗಿ ಭಾರತ 3 ತಂಡಗಳಲ್ಲಿ ಒಂದರಲ್ಲೂ ಸ್ಥಾನ ಲಭಿಸದಿರುವುದು ಗಿಲ್ ಬೇಸರಕ್ಕೆ ಕಾರಣ.
ವಿಂಡೀಸ್ ಪ್ರವಾಸದ ವೇಳೆ ಭಾರತ 3 ಟಿ20 ಪಂದ್ಯ, 3 ಏಕದಿನ ಪಂದ್ಯ ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದಕ್ಕಾಗಿ ಜುಲೈ 21ರಂದು ತಂಡಗಳನ್ನೂ ಪ್ರಕಟಿಸಿದೆ. ಆದರೆ ಪ್ರಕಟಿತ ಯಾವ ತಂಡದಲ್ಲೂ ಶುಭ್‌ಮಾನ್ ಗಿಲ್ ಹೆಸರು ಇರಲಿಲ್ಲ.
ವೆಸ್ಟ್ ಇಂಡೀಸ್ 'ಎ' ವಿರುದ್ಧ ಪ್ರವಾಸ ಸರಣಿಯಲ್ಲಿ ಭಾರತ 'ಎ' ಪರ ಗಿಲ್ ಭರ್ಜರಿ ಬ್ಯಾಟ್ ಬೀಸುತ್ತಿದ್ದಾರೆ. ಹಾಗಿದ್ದೂ ಶುಭ್ ಮಾನ್ ಅವರನ್ನು ವಿಂಡೀಸ್ ಸರಣಿಯಲ್ಲಿ ಭಾರತದ ಯಾವ ತಂಡದಲ್ಲೂ ಪರಿಗಣಿಸಲಾಗಿಲ್ಲ.

ಉತ್ತಮ ಫಾರ್ಮ್‌ನಲ್ಲಿ ಗಿಲ್
ಸದ್ಯ ಭಾರತ 'ಎ' ತಂಡದಲ್ಲಿರುವ ಗಿಲ್, ಜುಲೈ 21ರ ಭಾನುವಾರ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ 'ಎ' ವಿರುದ್ಧದ ಅನಧಿಕೃತ ಏಕದಿನ ಸರಣಿಯಲ್ಲಿ 218 ರನ್ ಬಾರಿಸಿದ್ದರು. ಇದರಲ್ಲಿ ಅರ್ಧ ಶತಕಗಳೂ (62, 77 ರನ್) ಸೇರಿತ್ತು. ಉತ್ತಮ ಫಾರ್ಮ್‌ನಲ್ಲಿರುವ ಬಲಗೈ ಸ್ಟೈಲಿಷ್ ಪ್ಲೇಯರ್ ಗಿಲ್, ಹಿರಿಯರ ತಂಡದಲ್ಲಿ ಸ್ಥಾನ ಲಭಿಸುವ ನಿರೀಕ್ಷೆಯಲ್ಲಿದ್ದರು.

ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದೆ
'ಭಾನುವಾರ (ಜುಲೈ 21) ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಿಗಾಗಿ ತಂಡಗಳನ್ನು ಪ್ರಕಟಿಸುವುದನ್ನೇ ಕಾಯುತ್ತಿದ್ದೆ. ಯಾಕೆಂದರೆ ಕನಿಷ್ಠ ಒಂದು ತಂಡದಲ್ಲಾದ್ರೂ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದೆ,' ಎಂದು ಕ್ರಿಕೆಟ್ ನೆಕ್ಸ್ಟ್ ಜೊತೆ ಮಾತನಾಡುತ್ತ ಶುಭ್‌ಮಾನ್ ನಿರಾಶೆ ತೋರಿಕೊಂಡರು.

ಸಮಯ ಹಾಳು ಮಾಡಿಕೊಳ್ಳಲಾರೆ
'ಒಂದೂ ತಂಡದಲ್ಲೂ ಆರಿಸಲಾಗಿಲ್ಲದ್ದರಿಂದ ಬಹಳ ನಿರಾಶೆಯಾಗಿದೆ. ಆದರೆ ಅದರ ಬಗ್ಗೆಯೇ ಯೋಚಿಸುತ್ತ ನಾನು ಸಮಯ ಹಾಳು ಮಾಡಿಕೊಳ್ಳಲಾರೆ. ಬದಲಿಗೆ ಹೆಚ್ಚು ರನ್ ಗಳಿಸಿ, ಶಕ್ತಿ ಮೀರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆ ಸಮಿತಿಯನ್ನು ಸೆಳೆಯಲು ಯತ್ನಿಸುತ್ತೇನೆ,' ಎಂದು ಗಿಲ್ ಹೇಳಿಕೊಂಡಿದ್ದಾರೆ.

4-1ರಿಂದ ಸರಣಿ ಜಯ
'ವೆಸ್ಟ್ ಇಂಡೀಸ್ 'ಎ' ವಿರುದ್ಧದ ಪ್ರವಾಸ ಸರಣಿ ಅದ್ಭುತವಾಗಿತ್ತು. ನಮ್ಮ ತಂಡ 4-1ರಿಂದ ಸರಣಿ ಜಯಿಸಿತು. ಇಲ್ಲಿ ಅರ್ಧ ಶತಕಗಳನ್ನು ಶತಕದತ್ತ ಕೊಂಡೊಯ್ಯಲು ಅವಕಾಶವಿತ್ತು. ಆದರೆ ನಾನು ಅನುಭವಗಳಿಂದ ಕಲಿಯುತ್ತಿದ್ದೇನೆ,' ಎಂದು ಗಿಲ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications