ಇನ್ನೇನು 19ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಈ ಐಪಿಎಲ್‌ಗಾಗಿ ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ವೇಳೆ ಎಲ್ಲರ ಕಣ್ಣುಗಳು ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಮೇಲೆ ನೆಟ್ಟಿವೆ. ಸಂಜು ಸ್ಯಾಮ್ಸನ್ ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ. ಇವರನ್ನು ಈ ಬಾರಿ ಐಪಿಎಲ್ ಹರಾಜಿಗೂ ಮುನ್ನ ಸಿಎಸ್‌ಕೆ, ಟ್ರೇಡ್ ನಿಯಮದಂತೆ ರಾಜಸ್ಥಾನ ರಾಯಲ್ಸ್ ಜೊತೆಗೆ ವಿನಿಮಯ ಮಾಡಿಕೊಂಡಿತ್ತು. ಈಗ ಈ ಆಟಗಾರ ಹಳದಿ ಜೆರ್ಸಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಚೆನ್ನೈ ಸೇರಿದ ಸಂಜು ಸ್ಯಾಮ್ಸನ್ ಬಗ್ಗೆ ಫಾಫ್ ಡುಪ್ಲೆಸಿಸ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರನ್ನು ತಂಡ ಕೈ ಬಿಟ್ಟಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದೆ ಎಂದು ಫಾಫ್ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್ ತಂಡಗಳ ಬಗ್ಗೆ ಜಿಯೋ ಹಾಟ್ ಸ್ಟಾರ್‌ನಲ್ಲಿ ಮಾತನಾಡುವಾಗ ಫಾಫ್ ದೊಡ್ಡ ಹೇಳಿಕೆ ನೀಡಿದ್ದಾರೆ. ಐಪಿಎಲ್ ತಂಡಗಳು ತಮ್ಮ ಪರವಾಗಿ ದೀರ್ಘಕಾಲದಿಂದ ಆಡುವ ಆಟಗಾರರನ್ನು ಹೊಂದಿವೆ. ಈ ಸಾಲಿನಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದ್ದಾರೆ. ಅದೇ ರೀತಿ ಸಂಜು ಸಹ ರಾಜಸ್ಥಾನ ರಾಯಲ್ಸ್ ತಂಡದ ಬ್ರ್ಯಾಂಡ್ ಆಗಿದ್ದರು. ಅವರು ತಂಡವನ್ನು ತೊರೆದಿರುವುದು ನಿಜಕ್ಕೂ ರಾಯಲ್ಸ್ ತಂಡಕ್ಕೆ ತುಂಬಲಾರದ ನಷ್ಟವಾಗಿದೆ.
ಸಂಜು ಸ್ಯಾಮ್ಸನ್ ಹೊಸತಲೆಮಾರಿನ ಆಟಗಾರನಾಗಿದ್ದರೂ ಸಹ ರಾಜಸ್ಥಾನ ರಾಯಲ್ಸ್ ತಂಡದ ಮುಖವಾಗಿದ್ದರು. ಇವರ ನಿರ್ಗಮನ ನಿಶ್ಚಿತವಾಗಿ ರಾಯಲ್ಸ್ ಅಭಿಮಾನಿಗಳಿಗೆ ಬೇಸರ ತಂದಿರುತ್ತದೆ.
ಸಂಜು ಸ್ಯಾಮ್ಸನ್ ಬೇರೆ ತಂಡಕ್ಕೆ ಹಾರಿದ್ದರಿಂದ ಇದರ ಒತ್ತಡ ಹಾಗೂ ಭಾರ ನೈಜವಾಗಿ ಆಡುತ್ತಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮೇಲೆ ಬೀಳುತ್ತದೆ. ಇನ್ನು ಮುಂದೆ ನೈಜ ಬ್ಯಾಟಿಂಗ್ ಯಶಸ್ವಿಗೆ ಸುಲಭವಲ್ಲ. ಯಶಸ್ವಿ ಜವಾಬ್ದಾರಿಯುತವಾಗಿ ಆಡಬೇಕು ಎಂದು ಫಾಫ್ ತಿಳಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರಿಂದ ತೆರವಾಗಿದ್ದ ನಾಯಕತ್ವದ ಸ್ಥಾನವನ್ನು ರಿಯಾನ್ ಪರಾಗ್ ತುಂಬಲಿದ್ದಾರೆ. ತಂಡವು ಮಾರ್ಚ್ 30 ರಂದು ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
31 ವರ್ಷದ ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಐಪಿಎಲ್ ವೃತ್ತಿ ಜೀವನವನ್ನು ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಆರಂಭಿಸಿದರು. 2013 ರಿಂದ 2015ರ ವರೆಗೆ ಮೂರು ಆವೃತ್ತಿಗಳನ್ನು ರಾಜಸ್ಥಾನ ಪರ ಆಡಿದ್ದ ಸಂಜು 2 ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವೂ ಆಡಿದ್ದಾರೆ. 2018ರಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ ಸೇರಿದರು. ಈ ವರೆಗೆ ಇವರು ಆಡಿದ 177 ಪಂದ್ಯಗಳಲ್ಲಿ 30ರ ಸರಾಸರಿಯಲ್ಲಿ 4704 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ.