ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸೇರಿದ ದಿನವೇ 54 ಎಸೆತಗಳಿಗೆ 101 ರನ್ ಚಚ್ಚಿ ಅಬ್ಬರಿಸಿದ ಆಟಗಾರ!

ಮುಂಬರುವ ಮಾರ್ಚ್ ತಿಂಗಳಿನ ಕೊನೆಯ ವಾರದಂದು ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಈ 2 ನೂತನ ತಂಡಗಳು ಭಾಗವಹಿಸುತ್ತಿರುವುದರಿಂದ್ದ ಸದ್ಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಇಂದು (ಫೆಬ್ರವರಿ 12) ಮತ್ತು ನಾಳೆ ( ಫೆಬ್ರವರಿ 13 ) 2 ದಿನಗಳ ಕಾಲ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗಿದ್ದು, ಈಗಾಗಲೇ ಮೊದಲನೇ ದಿನವಾದ ಇಂದಿನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇನ್ನು ಇಂದು ಒಟ್ಟು 74 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದು, 15.25 ಕೋಟಿ ಪಡೆದ ಇಶಾನ್ ಕಿಶನ್ ಅತಿ ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡರು. ಹಾಗೂ ಯಾವುದೇ ಬಿಡ್ ಪಡೆಯದ ಸುರೇಶ್ ರೈನಾ ಹಾಗೂ ಸ್ಟೀವ್ ಸ್ಮಿತ್ ಹರಾಜಾಗದೇ ಉಳಿದದ್ದು ತೀವ್ರ ಆಶ್ಚರ್ಯವನ್ನುಂಟುಮಾಡಿತು. ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ತಮ್ಮ ತಂಡದ ಪ್ರಮುಖ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ವಿಫಲವಾದದ್ದು ಕೂಡ ಒಂದು ರೀತಿಯ ಆಶ್ಚರ್ಯಕ್ಕೆ ಕಾರಣವಾಯಿತು.
ಸ್ಪೋಟಕ ಆರಂಭವನ್ನು ಮಾಡಬಲ್ಲ ಸಾಮರ್ಥ್ಯವಿರುವ ಹಾಗೂ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಎರಡನೇ ಆಟಗಾರ ಎನಿಸಿಕೊಂಡಿರುವ ಫಾಫ್ ಡು ಪ್ಲೆಸಿಸ್ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಾಗಿದ್ದಾರೆ. ಫಾಫ್ ಡು ಪ್ಲೆಸಿಸ್ ಮೇಲೆ ನಡೆದ ಜಿದ್ದಾಜಿದ್ದಿನ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ 7 ಕೋಟಿ ನೀಡುವುದರ ಮೂಲಕ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರಿದ ದಿನವೇ ಫಾಫ್ ಡು ಪ್ಲೆಸಿಸ್ ಅಬ್ಬರದ ಶತಕ ಬಾರಿಸಿ ಮಿಂಚಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಓದಿ..

ಫಾಫ್ ಡು ಪ್ಲೆಸಿಸ್ ಅಬ್ಬರದ ಶತಕ
ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಫಾಫ್ ಡು ಪ್ಲೆಸಿಸ್ ಕೋಮಿಲ್ಲಾ ವಿಕ್ಟೋರಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಇನ್ನು ಇಂದು ಕೋಮಿಲ್ಲಾ ವಿಕ್ಟೋರಿಯನ್ಸ್ ಮತ್ತು ಖುಲ್ನಾ ಟೈಗರ್ಸ್ ನಡುವೆ ನಡೆದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ 54 ಎಸೆತಗಳಿಗೆ 101 ರನ್ ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ಫಾಫ್ ಡು ಪ್ಲೆಸಿಸ್ ಅವರ ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಕೂಡ ಸೇರಿವೆ.

ಪಂದ್ಯ ಸೋತ ಕೋಮಿಲ್ಲಾ ವಿಕ್ಟೋರಿಯನ್ಸ್
ಫಾಫ್ ಡು ಪ್ಲೆಸಿಸ್ ಅಬ್ಬರದ ಶತಕದ ಸಹಾಯದಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿದ ಕೋಮಿಲ್ಲಾ ವಿಕ್ಟೋರಿಯನ್ಸ್ ಎದುರಾಳಿ ಖುಲ್ನಾ ಟೈಗರ್ಸ್ ತಂಡಕ್ಕೆ 183 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಆದರೆ ಖುಲ್ನಾ ಟೈಗರ್ಸ್ ತಂಡದ ಆರಂಭಿಕ ಆಟಗಾರರಾದ ಆ್ಯಂಡ್ರೆ ಫ್ಲೆಚರ್ ಮತ್ತು ಮಹೆದಿ ಹಸನ್ ಅಬ್ಬರದ ಆಟದ ನೆರವಿನಿಂದ 18.4 ಓವರ್‌ಗಳಲ್ಲಿಯೇ ಖುಲ್ನಾ ಟೈಗರ್ಸ್ 1 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಗೆಲುವಿನ ಗುರಿ ಮುಟ್ಟಿತು.

ಫಾಫ್ ಡು ಪ್ಲೆಸಿಸ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು
ಅತ್ತ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಫಾಪ್ ಡು ಪ್ಲೆಸಿಸ್ ಅಬ್ಬರದ ಶತಕ ಬಾರಿಸಿದರೆ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಸೇರ್ಪಡೆಗೊಂಡಿರುವ ಫಾಫ್ ಡು ಪ್ಲೆಸಿಸ್ ಆಟ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications