

ಕರಾಚಿ, ಜುಲೈ 20: ಪಾಕಿಸ್ತಾನ ಆಟಗಾರರಾದ ಇಮಾಮುಲ್ ಹಕ್ ಮತ್ತು ಫಖರ್ ಜಮಾನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಾರ್ಟ್ನರ್ ಶಿಪ್ ನಲ್ಲಿ ಅಧಿಕರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಫಖರ್, ದ್ವಿಶತಕ (210 ರನ್) ಸಿಡಿಸಿದ ಪಾಕಿಸ್ತಾನದ ಮೊದಲ ಆಟಗಾರನಾಗಿಯೂ ಮಿಂಚಿದ್ದಾರೆ.
ಆರಂಭಿಕರಾಗಿ ಇಳಿದು 304 ರನ್ ಚಚ್ಚಿದ ಇಮಾಮುಲ್ ಮತ್ತು ಫಖರ್ ಜೋಡಿಯು ಶ್ರೀಲಂಕಾದ ಉಪುಲ್ ತರಂಗಾ ಮತ್ತು ಸನತ್ ಜಯಸೂರ್ಯ 2006ರಲ್ಲಿ ಇಂಗ್ಲೆಂಡ್ ಎದುರು ನಿರ್ಮಿಸಿದ್ದ 286 ರನ್ ಪಾರ್ಟ್ನರ್ ಶಿಪ್ ದಾಖಲೆಯನ್ನು ಸರಿಗಟ್ಟಿ ಗಮನ ಸೆಳೆದರು. ಇವರು ಶುಕ್ರವಾರ (ಜುಲೈ 20) ಜಿಂಬಾಬ್ವೆ ವಿರುದ್ಧ ಬುಲವೇಯೋದಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಈ ಸಾಧನೆ ಮೆರೆದರು.
210 ರನ್ ಸಿಡಿಸಿದ ಜಮಾನ್ ಏಕದಿನದಲ್ಲಿ ದ್ವಿಶತಕ ಬಾರಿಸಿದ ಪಾಕಿಸ್ತಾನದ ಮೊದಲ ಆಟಗಾರರಾಗಿ ಗುರುತಿಸಿಕೊಂಡರೆ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಕ್ರಿಸ್ ಗೇಲ್, ಮಾರ್ಟಿನ್ ಗುಪ್ಟಿಲ್ ಬಳಿಕ ದ್ವಿಶತಕ ಸಾಧನೆ ಮೆರೆದ ವಿಶ್ವದ 6ನೇ ಬ್ಯಾಟ್ಸ್ಮನ್ ಸಾಧನೆಗೂ ಜಮಾನ್ ಕಾರಣರಾಗಿದ್ದಾರೆ.
ಈ ಹಿಂದೆ ಏಕದಿನ ಕ್ರಿಕೆಟ್ ನಲ್ಲಿ ಪಾಕಿಸ್ತಾನ ಪರ ಅಧಿಕ ರನ್ ಬಾರಿಸಿದ ದಾಖಲೆ ಸಾಯೀದ್ ಅನ್ವಾರ್ ಹೆಸರಿನಲ್ಲಿತ್ತು. ಸಾಯೀದ್, 1997ರಲ್ಲಿ 194ರನ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ 50 ಓವರ್ ಮುಕ್ತಾಯಕ್ಕೆ 1 ವಿಕೆಟ್ ಕಳೆದು 399 ಭರ್ಜರಿ ರನ್ ಪೇರಿಸಿದೆ. ಇದರಲ್ಲಿ ಇಮಾಮುಲ್ 113 ರನ್, ಫಖರ್ 210 ರನ್ ಸಿಡಿಸಿದರು. 122 ಎಸೆತಗಳನ್ನು ಎದುರಿಸಿದ ಇಮಾಮ್ 42ನೇ ಓವರ್ ನಲ್ಲಿ ವೆಲ್ಲಿಂಗ್ಟನ್ ಮಸಾಕಡ್ಜಾ ಅವರಿಗೆ ವಿಕೆಟ್ ಒಪ್ಪಿಸಿ ನಡೆದರು.