ಭಾನುವಾರದಂದು ನೂತನ ಪಾಕಿಸ್ತಾನ ಆಯ್ಕೆ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಲ್ತಾನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಸೋತ ನಂತರ ಬಾಬರ್ ಅಜಮ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ ಮತ್ತು ಸರ್ಫರಾಜ್ ಅಹ್ಮದ್ ಅವರನ್ನು ಎರಡು ಮತ್ತು ಮೂರನೇ ಪಂದ್ಯಗಳಿಗೆ ತಂಡದಿಂದ ಕೈಬಿಡಲಾಗಿದೆ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 15 ರಿಂದ ಮುಲ್ತಾನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರನ್ನು ಕೈ ಬಿಟ್ಟಿರುವುದು ಕುತೂಹಲ ಮೂಡಿಸಿದ್ದು, ಕ್ರಿಕೆಟ್ ಗಲ್ಲಿಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಆಟಗಾರರ ಫಖರ್ ಜಮಾನ್ ಅವರು ಬಾಬರ್ ಅಜಮ್‌ನನ್ನು ತಂಡದಿಂದ ಹೊರಗಿಟ್ಟಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗವಾಗಿ ಆಕ್ರೋಶ ಹೊರಹಾಕಿರುವ ಫಖರ್ ಜಮಾನ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಿರಿಯ ಆಟಗಾರನನ್ನು ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಳಪೆ ಫಾರ್ಮ್‌ನಲ್ಲಿದ್ದರೂ ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿಯನ್ನು ಕೈಬಿಡಲಾಗಿತ್ತೇ? ಎಂದು ಉದಾಹರಣೆಯನ್ನು ನೀಡುವ ಮೂಲಕ ಬಾಬರ್ ಅಜಮ್ ಅವರನ್ನು ಬೆಂಬಲಿಸಿದ್ದಾರೆ.
ಬಾಬರ್ ಆಜಮ್ ಅವರನ್ನು ತಂಡದಿಂದ ಕೈ ಬಿಟ್ಟಿರುವ ವಿಚಾರ ಕಳವಳಕ್ಕೆ ಕಾರಣವಾಗಿದೆ. 2020 ರಿಂದ 2023 ರ ನಡುವೆ ವಿರಾಟ್ ಕೊಹ್ಲಿ ಕ್ರಮವಾಗಿ 19.33, 28.21, ಮತ್ತು 26.50 ರ ಸರಾಸರಿಯಲ್ಲಿದ್ದಾಗ ಭಾರತವು ಅವರನ್ನು ಬೆಂಚ್ ಕಾಯುವುದಕ್ಕೆ ಬಿಡಲಿಲ್ಲ. ನಾವು ನಮ್ಮ ಪ್ರೀಮಿಯರ್ ಬ್ಯಾಟರ್ ಅನ್ನು ಬದಿಗಿಡಲು ನಿರ್ಧಾರ ಮಾಡಿದರೆ, ಪಾಕಿಸ್ಥಾನ ಇದುವರೆಗೆ ನಿರ್ಮಿಸಿದ ಅತ್ಯುತ್ತಮ ತಂಡಕ್ಕೆ ಅತ್ಯಂತ ಆಳವಾದ ನಕಾರಾತ್ಮಕ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ಪ್ಯಾನಿಕ್ ಬಟನ್ ಒತ್ತುವುದನ್ನು ತಪ್ಪಿಸಲು ಇನ್ನೂ ಸಮಯವಿದೆ. ನಮ್ಮ ಪ್ರಮುಖ ಆಟಗಾರರನ್ನು ದುರ್ಬಲಗೊಳಿಸುವ ಬದಲು ಅವರನ್ನು ರಕ್ಷಿಸಲು ನಾವು ಗಮನಹರಿಸಬೇಕು ಎಂದು ಪಾಕಿಸ್ತಾ ಕ್ರಿಕೆಟ್ ಬೋರ್ಡ್ (ಪಿಸಿಬಿ) ವಿರುದ್ಧ ಫಖರ್ ಜಮಾನ್ ಗುಡುಗಿದ್ದಾರೆ.
2022ರ ಡಿಸೆಂಬರ್ ತಿಂಗಳಿಂದ ಬಾಬರ್ ಅಜಮ್ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಕಿಸ್ತಾನ ಆಡಿರುವ ಯಾವುದೇ ಸರಣಿಯಲ್ಲಿ ಬಾಬರ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಜೊತೆಗೆ 2022ರ ಡಿಸೆಂಬರ್ ನಂತರ ಅವರು, ಒಂದೇ ಒಂದು ಟೆಸ್ಟ್ ಅರ್ಧಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ, ಬಾಬರ್ ಕ್ರಮವಾಗಿ ಎರಡೂ ಇನ್ನಿಂಗ್ಸ್‌ಗಳಲ್ಲಿ 30 ಮತ್ತು 5 ರನ್ ಗಳಿಸಿದ್ದರು. ತಂಡಕ್ಕೆ ಆಸರೆಯಾಗಬೇಕಿದ್ದ ಸ್ಟಾರ ಬ್ಯಾಟರ್ ಇದೀಗ ಹೊರಗುಳಿದಿದ್ದಾರೆ.
ಬಾಬರ್ ಅಜಮ್ ಜೊತೆಗೆ ವೇಗದ ಬೌಲರ್ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸರ್ಫರಾಜ್ ಅಹ್ಮದ್, ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಕೈಬಿಡಲಾಗಿದೆ. ಇವರ ಬದಲಿಗೆ ವಿಕೆಟ್‌ಕೀಪರ್ ಹಸಿಬುಲ್ಲಾ, ಮೆಹ್ರಾನ್ ಮುಮ್ತಾಜ್, ಕಮ್ರಾನ್ ಗುಲಾಮ್, ಮೊಹಮ್ಮದ್ ಅಲಿ, ಸಾಜಿದ್ ಖಾನ್, ನೋಮನ್ ಅಲಿ ಮತ್ತು ಜಾಹಿದ್ ಮಹಮೂದ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ.