ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದ ಅಭಿಮಾನಿಗೆ ಅಖ್ತರ್ ಕೊಟ್ಟ ಉತ್ತರವಿದು

ಸದ್ಯ ವಿರಾಟ್ ಕೊಹ್ಲಿ ಸುಮಾರು ಎರಡೂವರೆ ವರ್ಷಗಳಿಂದ ಶತಕ ಬಾರಿಸಲಾಗದೇ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ತಮ್ಮ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರಾಸೆಯನ್ನು ಉಂಟುಮಾಡಿದ್ದಾರೆ. ಹೌದು, ವಿರಾಟ್ ಕೊಹ್ಲಿ ಸದ್ಯಕ್ಕೆ ಅನುಭವಿಸುತ್ತಿರುವಷ್ಟು ಕಳಪೆ ಫಾರ್ಮನ ಹಿನ್ನಡೆಯನ್ನು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ಯಾವ ಸಮಯದಲ್ಲಿಯೂ ಕೂಡ ಅನುಭವಿಸಿರಲಿಲ್ಲ.
ಅದರಲ್ಲಿಯೂ ಇತ್ತೀಚಿನ ಪಂದ್ಯಗಳಲ್ಲಿ ಅರ್ಧಶತಕ ಬಾರಿಸುವುದಕ್ಕೂ ಹಾಗೂ ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದಲ್ಲಿ ಎರಡಂಕೆಯ ರನ್ ಕಲೆ ಹಾಕುವುದಕ್ಕೂ ಕೂಡಾ ಪರದಾಡಿದ ವಿರಾಟ್ ಕೊಹ್ಲಿ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗಳು ಆರಂಭವಾಗಿವೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್ ಟ್ರೋಫಿ ತಂದುಕೊಟ್ಟ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಹಾಗೂ ಹಲವಾರು ಹಿರಿಯ ಕ್ರಿಕೆಟಿಗರು ಕೊಹ್ಲಿಯನ್ನು ತಂಡದಿಂದ ಹೊರ ಹಾಕಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೆ, ಪಾಕಿಸ್ತಾನದ ಬಾಬರ್ ಅಜಮ್ ಸೇರಿದಂತೆ ಇನ್ನೂ ಹಲವಾರು ಸಕ್ರಿಯ ಕ್ರಿಕೆಟಿಗರು ಹಾಗೂ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.
ಹೀಗೆ ಕಳಪೆ ಫಾರ್ಮ್ ಹೊರತಾಗಿಯೂ ಸಾಕಷ್ಟು ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಕುರಿತಾಗಿ ಇತ್ತೀಚೆಗಷ್ಟೇ ಟ್ವಿಟ್ಟರ್ ವೇದಿಕೆಯಲ್ಲಿ ಪಾಕ್ ಮಾಜಿ ಕ್ರಿಕೆಟಿಗ ಅಖ್ತರ್ ಅಭಿಮಾನಿಗೆ ನೀಡಿದ ಉತ್ತರ ಸದ್ಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ. ಈ ಕುರಿತಾದ ವಿವರ ಕೆಳಕಂಡಂತಿದೆ.
One word for Virat Kohli #Rawalpindiexpressthefilm
— Zayan Khan (ZynKhliji) July 24, 2022
ಕೊಹ್ಲಿ ಬಗ್ಗೆ ಒಂದು ಪದದ ಉತ್ತರ ನೀಡಿ ಎಂದ ಅಭಿಮಾನಿ
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಿನ್ನೆ ( ಜುಲೈ 24 ) ತಮ್ಮ ಅನುಯಾಯಿಗಳ ಜತೆ ಪ್ರಶ್ನೋತ್ತರದ ಟ್ವೀಟ್ ಮಾಡಿದ್ದಾರೆ. ಈ ವೇಳೆ ನೆಟ್ಟಿಗರೊಬ್ಬರು ವಿರಾಟ್ ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಏನು ಹೇಳಲು ಬಯಸುತ್ತೀರಾ ಎಂಬ ಪ್ರಶ್ನೆಯನ್ನು ಟ್ವೀಟ್ ಮೂಲಕ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಶೋಯೆಬ್ ಅಖ್ತರ್ 'ಲೆಜೆಂಡ್ ಆಲ್ರೆಡಿ' ( ಕೊಹ್ಲಿ ಈಗಾಗಲೇ ದಂತಕತೆಯಾಗಿದ್ದಾರೆ ) ಎಂದು ಬರೆದುಕೊಂಡಿದ್ದಾರೆ. ಸದ್ಯ ಶೋಯೆಬ್ ಅಖ್ತರ್ ನೀಡಿರುವ ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ.

ತಮ್ಮ ಬಯೋಪಿಕ್ ಬಿಡುಗಡೆ ಮಾಡಿದ ಶೋಯಬ್ ಅಖ್ತರ್
ಶೋಯಬ್ ಅಖ್ತರ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ರಚಿಸಲಾಗಿರುವ "ರಾವಲ್ಪಿಂಡಿ ಎಕ್ಸ್‌ಪ್ರೆಸ್ - ರನ್ನಿಂಗ್ ಅಗೈನ್ಸ್ಟ್ ದ ಆಡ್ಸ್" ಎಂಬ ಬಯೋಪಿಕ್ ಅನ್ನು ಜುಲೈ 24ರ ಭಾನುವಾರದಂದು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆಗೊಳಿಸಿದರು. ಹೀಗೆ ಬಯೋಪಿಕ್ ಬಿಡುಗಡೆ ಮುಕ್ತಾಯವಾದ ನಂತರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೋಯಬ್ ಅಖ್ತರ್ ತಮ್ಮ ಅನುಯಾಯಿಗಳ ಜತೆ ಪ್ರಶ್ನೋತ್ತರದ ಟ್ವೀಟ್ ನಡೆಸಿದರು.

ಈ ಹಿಂದೆಯೂ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದ ಅಖ್ತರ್
ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತದ್ದು ಇದೇ ಮೊದಲೇನಲ್ಲ. ಈ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಕಳಪೆ ಪ್ರದರ್ಶನ ನೀಡಿ ನಂತರ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿಗೆಂದು ಹೊರಗುಳಿದಿದ್ದಾಗ ಕೊಹ್ಲಿ ವಿರುದ್ಧ ಸಾಕಷ್ಟು ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗಿದ್ದವು. ಈ ವೇಳೆ ಕೊಹ್ಲಿ ಪರ ಬ್ಯಾಟ್ ಬೀಸಿದ್ದ ಶೋಯೆಬ್ ಅಖ್ತರ್ 'ವಿರಾಟ್ ಕೊಹ್ಲಿ ಕತೆ ಮುಕ್ತಾಯಗೊಂಡಿದೆ ಹಾಗೂ ಆತನನ್ನು ತಂಡದಿಂದ ಹೊರಗಿಡಬೇಕು, ಆತನಿಂದ ಇನ್ನೇನು ಆಗುವುದಿಲ್ಲ ಎಂಬ ಮಾತುಗಳನ್ನು ಕೆಲವರು ಹೇಳುತ್ತಿದ್ದಾರೆ. ಅಂಥವರಿಗೆ ನಾನು ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ ಎಂಬುದನ್ನು ಹೇಳಲು ಇಚ್ಛಿಸುತ್ತೇನೆ. ಕಳೆದ ದಶಕದಲ್ಲಿ ಶ್ರೇಷ್ಠ ಆಟಗಾರ ಎಂದು ಯಾರಾದರೂ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ಕಳೆದೆರಡು ವರ್ಷಗಳಿಂದ ವಿರಾಟ್ ಕೊಹ್ಲಿ ರನ್ ಗಳಿಸುತ್ತಿದ್ದಾರೆ ಆದರೆ ಶತಕ ಬಾರಿಸಿಲ್ಲ ಅಷ್ಟೇ' ಎಂದು ಕೊಹ್ಲಿಯನ್ನು ಬೆಂಬಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications