FIFA WC 2022: ಪಂಚತಾರ ಹೋಟೆಲ್ ಬಿಟ್ಟು ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ಯಾಕೆ ಮೆಸ್ಸಿ ನೇತೃತ್ವದ ಅರ್ಜೆಂಟೀನಾ?

ಫಿಫಾ ವಿಶ್ವಕಪ್ 2022 ಭಾನುವಾರದಿಂದ ಆರಂಭವಾಗಲಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಫುಟ್ಬಾಲ್ ಪಂದ್ಯಗಳನ್ನು ಕಣ್ತಂಬಿಕೊಳ್ಳಲು ಕಾಯುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಭಾಗವಹಿಸುವ 32 ತಂಡಗಳು ಈಗಾಗಲೇ ಕತಾರ್ ನಲ್ಲಿ ಬೀಡು ಬಿಟ್ಟಿವೆ. ತಮ್ಮ ಅಭ್ಯಾಸ ಪಂದ್ಯಗಳನ್ನು ಆಡಿರುವ ತಂಡಗಳು, ವಿಶ್ವಕಪ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕಾಯುತ್ತಿವೆ.
ಅರ್ಜೆಂಟೀನಾ ಈ ಬಾರಿ ಫುಟ್ಬಾಲ್ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ವಿಶ್ವ ವಿಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಈ ಆಟಗಾರ ಹೊಂದಿದ್ದಾರೆ.
ಅರ್ಜೆಂಟೀನಾ ತಂಡದ ಆಟಗಾರರು ಈಗಾಗಲೇ ಕತಾರ್ ನಲ್ಲಿ ಬೀಡು ಬಿಟ್ಟಿದ್ದಾರೆ. ಲಿಯೋನೆಲ್ ಮೆಸ್ಸಿ ನೇತೃತ್ವದ ಅಜೆಂಟೀನಾ ಕತಾರ್ ನಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡದೇ ಕತಾರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳಲು ತೀರ್ಮಾನಿಸಿದೆ.
ಬಾರ್ಬೆಕ್ಯೂ ಮಾಂಸದ ಖಾದ್ಯ ಅಸಡೋವನ್ನು ಆಸ್ವಾದಿಸಲು ಅರ್ಜೆಂಟೀನಾ ತಂಡ ಈ ನಿರ್ಧಾರ ತೆಗೆದುಕೊಂಡಿದೆ. ಅವರು ತಂಗಿರುವ ವಿದ್ಯಾರ್ಥಿ ನಿಲಯದ ಹಾಲ್‌ನಲ್ಲಿ ಈಗಾಗಲೇ ಬಾರ್ಬೆಕ್ಯೂ ಸ್ಟೇಷನ್ ಅನ್ನು ಸ್ಥಾಪಿಸಲಾಗಿದೆ.

ಅಸಾಡೋ ಅಲ್ಲಿನ ಜನರ ಬಹು ಇಷ್ಟದ ಖಾದ್ಯ
"ನಾವು ಕ್ಯಾಂಪಸ್‌ಗೆ ಹಲವು ಬಾರಿ ಭೇಟಿ ನೀಡಿ ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ ಅಲ್ಲಿ ಉಳಿಯುವ ತೀರ್ಮಾನ ಮಾಡಿದ್ದೇವೆ. ಇಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಸಾಡೋ ಖಾದ್ಯವನ್ನು ಆಸ್ವಾದಿಸಲು ಇಲ್ಲಿ ತೆರೆದ ಸ್ಥಳವಿದೆ. ಅರ್ಜೆಂಟೀನಾದವರಿಗೆ ಇದು ಬಹಳ ಮುಖ್ಯವಾಗಿದೆ, ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
"ಆಟಗಾರರು ಕತಾರ್ ನಲ್ಲಿರುವಾಗ ಅವರು ಮನೆಯಲ್ಲಿಯೇ ಇರುವಂತ ಭಾವನೆ ಬರುವಂತೆ ಮಾಡಲು ನಾವು ಬಯಸುತ್ತೇವೆ, ಅವರು ಫುಟ್‌ಬಾಲ್ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವಾಗ ಮನೆಯ ರುಚಿಯನ್ನು ಸವಿಯಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಈ ತೀರ್ಮಾನ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಮೂರನೇ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿ ಅರ್ಜೆಂಟೀನಾ
ಅರ್ಜೆಂಟೀನಾ ಇದುವರೆಗೂ ಎರಡು ಬಾರಿ (1978, 1986) ರಲ್ಲಿ ವಿಶ್ವಕಪ್ ಗೆದ್ದಿದೆ. ಅಲ್ಲದೆ ಕಳೆದ 36 ಪಂದ್ಯಗಳಲ್ಲಿ ಅರ್ಜೆಂಟೀನಾ ಸೋಲು ಕಂಡಿಲ್ಲ. ದುಬೈನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ 5-0 ಗೋಲುಗಳಿಂದ ಯುಎಇ ತಂಡವನ್ನು ಸೋಲಿಸಿದೆ.
ಲಿಯೋನೆಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇದ್ದು, ದೇಶಕ್ಕಾಗಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಅರ್ಜೆಂಟೀನಾ ಈ ಬಾರಿ ವಿಶ್ವಕಪ್‌ನಲ್ಲಿ ಸಿ ಗುಂಪಿನಲ್ಲಿದೆ. ಸೌದಿ ಅರೇಬಿಯಾ, ಮೆಕ್ಸಿಕೋ ಮತ್ತು ಪೋಲೆಂಡ್ ಈ ಗುಂಪಿನಲ್ಲಿರುವ ತಂಡಗಳಾಗಿವೆ. ನವೆಂಬರ್ 22ರಂದು ಲುಸೈಲ್ ಸ್ಟೇಡಿಯಂನಲ್ಲಿ ಸೌದಿ ಅರೇಬಿಯಾವನ್ನು ಎದುರಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications