ಟಿ20 ಸರಣಿಯಲ್ಲಿ ಭಾರತಕ್ಕೆ ವಿಂಡೀಸ್‌ನ ಈ ಆಟಗಾರರಿಂದ ಅಪಾಯ!

ಬೆಂಗಳೂರು, ಜುಲೈ 25: ಏಕದಿನ ಕ್ರಿಕೆಟ್ ವಿಶ್ವಕಪ್‌ನ 12ನೇ ಆವೃತ್ತಿಯಲ್ಲಿ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆದ್ದಿದ್ದು ಇವಾಗ ಇತಿಹಾಸ. ಇನ್ನೇನಿದ್ದರೂ ಮುಂದಿನ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಕಡೆಗೆ ಎಲ್ಲಾ ತಂಡಗಳು ಗಮನ ನೀಡಿವೆ.
ಟಿ20 ವಿಶ್ವಕಪ್‌ಗೆ ಭರದ ಸಿದ್ಧತೆ ನಡೆಸುವ ಸಲುವಾಗಿ ಭಾರತ ತಂಡ ಮುಂದಿನ ಎಲ್ಲಾ ದ್ವಿಪಕ್ಷೀಯ ಸರಣಿಗಳಲ್ಲಿ ಕನಿಷ್ಠ ಮೂರು ಟಿ20 ಪಂದ್ಯಗಳನ್ನು ಆಡಲಿದ್ದು, ಮೊದಲಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಚುಟುಕು ಕ್ರಿಕೆಟ್ ಕದನ ನಡೆಸಲಿದೆ. ಆಗಸ್ಟ್ 3ರಂದು ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಭಾರತ ತಂಡ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನವನ್ನೇ ನೀಡಿದೆ. ಆದರೆ, ಟಿ20 ಕ್ರಿಕೆಟ್‌ನಲ್ಲಿ ಅಷ್ಟು ಪರಿಣಾಮಕಾರಿ ಆಟ ಹೊರಬಂದಿಲ್ಲ ಎಂದೇ ಹೇಳಬಹುದು. ಮತ್ತೊಂದೆಡೆ ಆತಿಥೇಯ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತನ್ನ ಛಾಪು ಕಳೆದುಕೊಂಡಿದೆಯಾದರೂ, ಟಿ20 ಕ್ರಿಕೆಟ್‌ನಲ್ಲಿ ದೈತ್ಯ ತಂಡವಾಗಿ ಬೆಳೆದು ನಿಂತಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಟಿ20 ಲೀಗ್‌ಗಳಲ್ಲಿ ವೆಸ್ಟ್ ಇಂಡೀಸ್ ಆಟಗಾರರಿಗೆ ಇರುವ ಅಪಾರ ಬೇಡಿಕೆ ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪಂದ್ಯವನ್ನು ಯಾವುದೇ ಸಂದರ್ಭದಲ್ಲಿ ಏಕಾಂಗಿಯಾಗಿ ಗೆದ್ದುಕೊಡಬಲ್ಲ ಬಲಿಷ್ಠ ಆಟಗಾರರ ದಂಡನ್ನೇ ಕೆರಿಬಿಯನ್ ಪಡೆ ಪಡೆದಿದೆ. ಹೀಗಿರುವಾಗ ಟೆಸ್ಟ್ ಕ್ರಿಕೆಟ್‌ನ ನಂ.1 ತಂಡವಾಗಿರುವ ಭಾರತ, ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಲಘುವಾಗಿ ಪರಿಗಳಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ಅಂದಹಾಗೆ ಆಗಸ್ಟ್ 3ರಿಂದ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾಗೆ ಅಪಾಯಕಾರಿ ಆಗಬಲ್ಲ ವಿಂಡೀಸ್ ಆಟಗಾರರು ಯಾರೆಲ್ಲಾ ಎಂಬುದನ್ನು ಮೈಖೇಲ್ ಕನ್ನಡ ಇಲ್ಲಿ ವಿವರಿಸಿದೆ.

1. ಶ್ರಿಮ್ರಾನ್ ಹೆಟ್ಮಾಯೆರ್ (ಎಡಗೈ ಬ್ಯಾಟ್ಸ್‌ಮನ್)
ವೆಸ್ಟ್ ಇಂಡೀಸ್ ತಂಡದ ಭವಿಷ್ಯದ ತಾರೆಗಳಲ್ಲಿ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮಾಯೆರ್ ಕೂಡ ಒಬ್ಬರು. 19 ವರ್ಷದೊಳಗಿನವರ ವೆಸ್ಟ್ ಇಂಡೀಸ್ ತಂಡದ ನಾಯಕ ಕೂಡ ಆಗಿದ್ದ ಹೆಟ್ಮಾಯರ್ ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಶಿಮ್ರಾನ್ ಅತ್ಯಂತ ಬೇಡಿಕೆಯಲ್ಲಿ ಇರುವ ಆಟಗಾರ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 40ರ ಸರಾಸರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ 3ನೇ ಸ್ಥಾನದಲ್ಲಿದ್ದರು. ಇನಿಂಗ್ಸ್ ಮಧ್ಯದಲ್ಲಿ ಸ್ಪಿನ್ನರ್‌ಗಳ ಎದುರು ದೊಡ್ಡ ಹೊಡೆತಗಳನ್ನಾಡಿ ತ್ವರಿತಗತಿಯಲ್ಲಿ ರನ್ ಗಳಿಸುವ ಮೂಲಕ ನಂತರ ಬರುವ ಬ್ಯಾಟ್ಸ್‌ಮನ್‌ಗಳ ಕೆಲವನ್ನು ಸುಲಭವನ್ನಾಗಿಸುವುದರಲ್ಲಿ ನಿಸ್ಸೀಮರು. ಭಾರತ ತಂಡದ ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಹಲ್, ಕೃಣಲ್ ಪಾಂಡ್ಯ ಮತ್ತು ರಾಹುಲ್ ಚಹರ್ ಎದುರು ಹೆಟ್ಮಾಯೆರ್ ಆಕ್ರಮಣಕಾರಿ ಆಟಕ್ಕಿಳಿದರೆ ಅಚ್ಚರಿಯೇನಲ್ಲ.

2. ನಿಕೋಲಸ್ ಪೂರನ್ (ಎಡಗೈ ಬ್ಯಾಟ್ಸ್‌ಮನ್)
ವೆಸ್ಟ್ ಇಂಡೀಸ್ ತಮಡದಲ್ಲಿ ಕ್ರಿಸ್ ಗೇಲ್ ಅವರ ಸ್ಥಾನ ತುಂಬುವ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್. 2015ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಪೂರನ್ ಅವರ ವೃತ್ತಿ ಬದುಕೇ ಅಂತ್ಯಗೊಳ್ಳುವಷ್ಟು ಪೆಟ್ಟಾಗಿತ್ತು. ಆದರೆ, ಕ್ರಿಕೆಟ್‌ನಿಂದ ಕೆಲ ಕಾಲ ದೂರ ಉಳಿದು ಸಂಪೂರ್ಣ ಚೇತರಿಕೆ ಕಡೆಗೆ ಗಮನ ನೀಡಿದ ವಿಂಡೀಸ್‌ನ ಯುವ ತಾರೆ, ಮರಳಿ ಬ್ಯಾಟ್ ಹಿದ ಬಳಿಕ ರನ್ ಸುರಿಮಳೆಗೈದು ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆಯಾದರು. ನಿಜಜೀವನದಲ್ಲಿನ ಅವರ ಈ ದಿಟ್ಟತನವನ್ನು ಅವರ ಬ್ಯಾಟಿಂಗ್‌ನಲ್ಲೂ ಕಾಣಬಹುದಾಗಿದೆ. ತಂಡದ ಗೆಲುವಿಗಾಗಿ ಪೂರನ್ ಎಲ್ಲವನ್ನೂ ಪಣಕ್ಕಿಟ್ಟು ಆಡುವ ಆಟಗಾರ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ ಕೂಡ. ಕಿಂಚಿತ್ತೂ ಹೆದರಿಕೆ ಇಲ್ಲದೆ ನಿರಾಯಾಸವಾಗಿ ವಿಶ್ವದ ಯಾವುದೇ ಬೌಲಿಂಗ್ ದಾಳಿ ಎದುರು ರನ್‌ಗಳಿಸು ತಾಕತ್ತು ಅವರಲ್ಲಿದೆ. ವಿಶ್ವಕಪ್‌ಗೂ ಮುನ್ನ ನಡೆದ ಇಂಗ್ಲೆಂಡ್, ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗಳಲ್ಲಿ ವಿಂಡೀಸ್ ಪರ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಪೂರನ್ ಎರಡನೇಯವರು ಎಂಬುದು ವಿಶೇಷ. ಇತ್ತೀಚೆಗೆ ಅಂತ್ಯಗೊಂಡ ವಿಶ್ವಕಪ್‌ನಲ್ಲೂ ಪೂರನ್ ತಮ್ಮ ಬ್ಯಾಟಿಂಗ್ ವೈಭವ ಅನಾವರಣ ಪಡಿಸಿದ್ದರು.

3. ಆಂಡ್ರೆ ರಸೆಲ್ (ಆಲ್‌ರೌಂಡರ್)
ಚೆಂಡನ್ನು ಕ್ರೀಡಾಂಗಣದಿಂದ ಹೊರಗೆ ಬಾರಿಸುವಲ್ಲಿ ವಿಂಡೀಸ್‌ನ ದೈತ್ಯ ಪ್ರತಿಭೆ ಆಂಡ್ರೆ ರಸೆಲ್ ನಿಸ್ಸೀಮರು. ಕೆಲ ತಿಂಗಳ ಹಿಂದಷ್ಟೇ ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಸೆಲ್ ಪ್ರದರ್ಶಿಸಿದ ವಿಶ್ವ ರೂಪವನ್ನು ಯಾರೂ ಮರೆತಿರಲಿಕ್ಕಿಲ್ಲ. ರಸೆಲ್ ಸಂಪೂರ್ಣ ಫಿಟ್ ಆಗಿದ್ದಲ್ಲಿ ಆದಿನ ಬೌಲರ್‌ಗಳಿಗೆ ಕರಾಳದಿನವೇ ಸರಿ. ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲ ಆಟಗಾರ ರಸೆಲ್. ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ತಮ್ಮ ಬೌಲಿಂಗ್‌ನಲ್ಲೂ ಗಂಟೆಗೆ 145 ಕಿ.ಮೀ ಸರಾಸರಿ ವೇಗದ ಬೌಲ್ ಮಾಡಬಲ್ಲ ಅವರು ಅಪ್ಪಟ ವಿಕೆಟ್ ಟೇಕರ್. ಟಿ20 ಕ್ರಿಕೆಟ್‌ನಲ್ಲಿ 17 ಅರ್ಧಶತಕಗಳು ಮತ್ತು 2 ಶತಕಗಳು ಅವರ ಹೆಸರಲ್ಲಿದ್ದು, 270 ವಿಕೆಟ್‌ಗಳನ್ನು ಕೂಡ ಪಡೆದಿದ್ದಾರೆ. 2019ರ ಐಪಿಎಲ್‌ನಲ್ಲಿ ಅವರು 56.67ರ ಸರಾಸರಿಯಲ್ಲಿ 510 ರನ್‌ಗಳನ್ನು ಚೆಚ್ಚಿದ್ದರು. ಹೀಗಾಗಿ ರಸೆಲ್ ಅವರನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಪ್ರತ್ಯೇಕ ರಣತಂತ್ರವನ್ನೇ ರಚಿಸಬೇಕಿದೆ.

4. ಕಾರ್ಲೋಸ್ ಬ್ರಾತ್‌ವೇಟ್ (ಆಲ್‌ರೌಂಡರ್)
ಇತ್ತೀಚೆಗೆ ಅಂತ್ಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕಾರ್ಲೋಸ್ ಬ್ರಾತ್ ವೇಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಕಂಡು ಎಲ್ಲರೂ ಮೂಕವಿಸ್ಮಿತರಾಗಿದ್ದರು. ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿದ್ದ ವಿಂಡೀಸ್ ಬ್ರಾತ್‌ವೇಟ್ ತಮ್ಮ ಸ್ಫೋಟಕ ಶತಕದ ಮೂಲಕ ಏಕಾಂಗಿಯಾಗಿ ಗೆಲುವು ತಂದುಕೊಡುವುದರಲ್ಲಿದ್ದರು. ಆದರೆ ಸಿಕ್ಸರ್ ಹೊಡೆಯುವ ಯತ್ನದಲ್ಲಿ ವಿಫಲರಾಗಿದ್ದರು. ಇನ್ನು 2015ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಕೊನೆಯ ಓವರ್‌ನಲ್ಲಿ ಸತತ 4 ಸಿಕ್ಸರ್ ಸಿಡಿಸಿನ ಕೆರಿಬಿಯನ್ನರಿಗೆ ಚಾಂಪಿಯನ್ಸ್ ಪಟ್ಟ ಗೆದ್ದುಕೊಟ್ಟಿದು ಕೂಡ ಇದೇ ಬ್ರಾತ್‌ವೇಟ್. ಹೀಗಾಗಿ ಮುಂಬರುವ ಟಿ20 ಸರಣಿಯಲ್ಲಿ ಈ ಹೆಸರು ನೆನಪಿನಲ್ಲಿಟ್ಟುಕೊಟ್ಟುವುದು ಉತ್ತಮ. ಟಿ20ಯಲ್ಲಿ 131 ವಿಕೆಟ್‌ಗಳನ್ನು ಪಡೆದಿರುವ ದೈತ್ಯ ಆಲ್‌ರೌಂಡರ್, ಬ್ಯಾಟಿಂಗ್‌ನಲ್ಲಿ ಹುಬ್ಬೇರಿಸುವಂತಹ 144.68ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಜಸ್‌ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಬೌಲರ್ ಅನುಪಸ್ಥಿತಿಯಲ್ಲಿ ಭಾರತ ತಂಡ ಈ ಬಿಗ್ ಹಿಟ್ಟರ್‌ಗಳನ್ನು ಹೇಗೆ ಕಟ್ಟಿಹಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

5. ಸುನಿಲ್ ನರೈನ್ (ಸ್ಪಿನ್ನರ್)
ಸುನಿಲ್ ನರೇನ್ ಒಬ್ಬ ಮಾಂತ್ರಿಕ ಎಂದೇ ಹೇಳಬಹದು. ಬಹು ಸಮಯದ ಬಳಿಕ ಅವರು ವೆಸ್ಟ್ ಇಂಡೀಸ್ ತಂಡಕ್ಕೆ ಮರಳಿದ್ದಾರೆ. ಅಂದಹಾಗೆ ನರೈನ್ ಇದೀಗ ಕೇವಲ ಪರಿಣತ ಸ್ಪಿನ್ನರ್ ಮಾತ್ರವೇ ಅಲ್ಲ ಅಪಾಯಕಾರಿ ಬ್ಯಾಟ್ಸ್‌ಮನ್ ಕೂಡ. ಬೌಲಿಂಗ್‌ನಲ್ಲಿ ಕ್ಯಾರಮ್ ಬಾಲ್, ದೂಸ್ರಾ, ಕ್ವಿಕರ್ ಒನ್, ನಕಲ್ ಬಾಲ್ ಹೀಗೆ ಅನೇಕ ಅಸ್ತ್ರಗಳನ್ನು ಹೊಂದಿರುವ ಸುನಿಲ್, ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಎದುರಾಳಿಯ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕೊತಾ ನೈಟ್ ರೇಡರ್ಸ್ ಪರ ಆಲ್‌ರೌಂಡರ್ ಆಗಿ ಅತ್ಯಂತ ಪ್ರಭಾವಯುತ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ತಂಡದ ಖಾಯಂ ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ಸ್ಥಾನ ಗಿಟ್ಟಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 370 ವಿಕೆಟ್‌ಗಳು ಅವರ ಹೆಸರಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications