
ಟಿ20 ಹಾಗೂ ಏಕದಿನ ನಾಯಕತ್ವದಿಂದ ಕೆಳಕ್ಕಿಳಿದ ವಿರಾಟ್ ಕೊಹ್ಲಿ
ಪ್ರಮುಖ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿದ್ದಾರೆ ಹೀಗಾಗಿ ನಾಯಕತ್ವ ಬದಲಾವಣೆಯಾಗಬೇಕು ಎಂಬ ಕೂಗು ಸಾಕಷ್ಟು ಬಾರಿ ಕೇಳಿ ಬಂದಿತ್ತು. ಅದಕ್ಕೆ ಪೂರಕವೆಂಬಂತೆ ಈ ಬಾರಿಯ ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ ಅಂತ್ಯದ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ ಎಂದಿದ್ದರು ಕೊಹ್ಲಿ. ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತಕ್ಕೆ ತನ್ನ ಹೋರಾಟವನ್ನು ಕೊನೆಗೊಳಿಸುವುದರೊಂದಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದಿಮದ ಕೆಳಕ್ಕಿಳಿದಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಬಳಿಕ ಆರಂಭವಾಗಲಿರುವ ಏಕದಿನ ಸರಣಿಯನ್ನು ಒಳಗೊಂಡಂತೆ ಮುಂಬುವ ಏಕದಿನ ಸರಣಿಗಳಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಘೋಷಣೆ ಮಾಡಿತ್ತು.

ಕೊಹ್ಲಿ vs ಗಂಗೂಲಿ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಕ್ಕಿಳಿಸಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ವರದಿಗಳು ಆರಂಬದಲ್ಲಿ ಬಂದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಧ್ಯೆ ಬಿರುಕುಂಟಾಗಿದೆ ಎಂಬ ಸಂಗತಿ ದೊಡ್ಡ ಪ್ರಮಾಣದಲ್ಲಿ ಹರಿದಾಡಲು ಆರಂಭಿಸಿತ್ತು. ಈ ವಿಚಾರವಾಗಿ ಸ್ಪಷ್ಟನೆ ನೀಡಲು ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯನ್ನು ಕರೆದು ತನ್ನ ಹಾಗೂ ರೋಹಿತ್ ಶರ್ಮಾ ಮಧ್ಯೆ ಯಾವುದೇ ರೀತಿಯಲ್ಲಿಯೂ ವೈಮನಸ್ಸು ಇಲ್ಲ ಎಂಬುದನ್ನು ಘೋಷಿಸಿದರು. ಆದರೆ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವದಿಂದ ಕೆಳಕ್ಕಿಳಿಸುವ ಸಂದರ್ಭದಲ್ಲಿ ಬಿಸಿಸಿಐ ಸೂಕ್ತವಾದ ಸಂವಹನವನ್ನು ನಡೆಸಲಿಲ್ಲ ಎಂದು ಹೇಳಿದರು. ಅಲ್ಲದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ವಿರಾಟ್ ಕೊಹ್ಲಿಯನ್ನು ಟಿ20 ಕ್ರಿಕೆಟ್‌ನ ನಾಯಕತ್ವದಿಂದ ಕೆಳಕ್ಕಿಳಿಸದಂತೆ ಮನವಿ ಮಾಡಿಕೊಂಡಿದ್ದೆವು ಎಂಬ ಹೇಳಿಕೆಗೂ ಭಿನ್ನವಾದ ಹೇಳಿಕೆ ನೀಡುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದು ಖಚಿತವಾಯಿತು. ಈ ವಿಚಾರ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಹೇಳಿಕೆಗಳ ಪರ ಹಾಗೂ ವಿರೋಧವಾಗಿ ಸಾಕಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ರಾಹುಲ್ ದ್ರಾವಿಡ್ ಯುಗ ಆರಂಭ
ಈ ಮಧ್ಯೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಘಿದ್ದ ರವಿ ಶಾಸ್ತ್ರಿ ಅವರ ಅವಧಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಹೋರಾಟ ಕೊನೆಗೊಳ್ಳುವ ಮೂಲಕ ಮುಕ್ತಾಯವಾಯಿತು. ಹೀಗಾಗಿ ಭಾರತೀಯ ಕ್ರಿಕೆಟ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಟೀಮ್ ಇಂಡಿಯಾದ ತಾತ್ಕಾಲಿಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಈಗ ಪೂರ್ಣ ಕಾಲಿಕ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಇನ್ನು ರಾಹುಲ್ ದ್ರಾವಿಡ್ ತೊರೆದಿರುವ ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕವಾಗಿದ್ದಾರೆ.

ಭಾರತದ ಟೆಸ್ಟ್ ದಾಖಲೆ
*ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 3-1 ಅಂತರದ ಗೆಲುವು: ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1 ಅಂತರದಿಂದ ಗೆದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿತು. ಈ ಸರಣಿ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಒಇಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಿತು.
*WTC ಫೈನಲ್‌ನಲ್ಲಿ ಸೋಲು: ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನಿಡುತ್ತಿದ್ದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮಾತ್ರ ಎಡವಿತು. ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ಸೋಲು ಕಾಣುವ ಮೂಲಕ ಭಾರತ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿತು.
*ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮುನ್ನಡೆ: ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಯಿತು. ಆದರೆ ಸಪೂರ್ಣವಾದ ಈ ಸರಣಿಯಲ್ಲಿ ಭಾರತ ಸದ್ಯ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
*ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವು: ಇನ್ನು ನ್ಯೂಜಿಲೆಂಡ್ ವಿರುದ್ಧ ಭಾರತ ಎರಡು ಪಂದ್ಯಗಳ ಟೆಸ್ಟ ಸರಣಿಯಲ್ಲಿ ಭಾಗಿಯಾಯಿತು. ಈ ಸರಣಿಯನ್ನು ಭಾರತ 1-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.

ಏಕದಿನ ಸರಣಿ ದಾಖಲೆಗಳು
ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಗೆಲುವು: ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1 ಅಂತರದಿಂದ ಗೆಲುವು ಸಾಧಿಸಿತು.
ಶ್ರೀಲಂಕಾ ವಿರುದ್ಧ 2-1 ಅಂತರದ ಗೆಲುವು: ಈ ಬಾರಿ ಭಾರತದ ಪ್ರಮುಖ ತಂಡದ ಸದಸ್ಯರು ಇಂಗ್ಲೆಂಡ್ ಟೆಸ್ಟ್ ಸರಣಿಯ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಮತ್ತೊಂದು ತಂಡವನ್ನು ಶ್ರೀಲಂಕಾ ವಿರುದ್ಧ ಸರಣಿಯನ್ನಾಡಲು ಕಳುಹಿಸಿತ್ತು. ಶ್ರೀಖರ್ ಧವನ್ ನೇತೃತ್ವದ ಭಾರತ ತಂಡ ಈ ಸರಣಿಯಲ್ಲಿ 2-1 ಅಂತರದಿಮದ ಗೆಲುವು ಸಾಧಿಸಿತು.

ಭಾರತದ ಟಿ20 ದಾಖಲೆಗಳು
ಶ್ರೀಲಂಕಾ ವಿರುದ್ಧ 1-2 ಅಂತರದ ಸೋಲು: ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಯುವ ಆಟಗಾರರ ತಂಡ ಮೊದಲ ಪಂದ್ಯವನ್ನು ಗೆದ್ದುಕೊಂಡಿತ್ತಾದರೂ ಬಳಿಕ ಕೊರೊನಾವೈರಸ್ ತಂಡಕ್ಕೆ ಭಾರೀ ಆಘಾತವನ್ನು ನೀಡಿತು. ಈ ಸರಣಿಯನ್ನು ಟೀಮ್ ಇಂಡಿಯಾ 1-2 ಅಂತರದಿಂದ ಸೋಲು ಕಂಡಿದೆ.
ಟಿ20 ವಿಶ್ವಕಪ್, ಸೂಪರ್ 12 ಹಂತದಿಂದ ನಿರ್ಗಮನ: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಗೆಲ್ಲುವ ಫೇವರೀಟ್ ತಂಡವಾಗಿ ಕಣಕ್ಕಿಳಿದಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಪರಿಣಾಮವಾಗಿ ಟೂರ್ನಿಯ ಸೂಪರ್ 12 ಹಂತದಿಂದಲೇ ನಿರ್ಗಮಿಸಿತ್ತು.
ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಗೆಲುವು: ಇನ್ನು ಟಿ20 ವಿಶ್ವಕಪ್ ಮುಕ್ತಾಯವಾದ ಬಳಿಕ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ಟಿ20 ಸರಣಿಯಲ್ಲಿ ಆಡಿತ್ತು ಈ ಸರಣಿಯಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಕೂಡ ಭಾರತ ಗೆದ್ದಿದ್ದು 3-0 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.


Click it and Unblock the Notifications
