Flashback 2022: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮರೆಯಲಾಗದ ಕ್ಷಣಗಳಿವು

ಹಲವು ಕಾರಣಗಳಿಂದಾಗಿ 2022ರ ಐಪಿಎಲ್ ಆವೃತ್ತಿ ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ತಂಡಗಳು ಐಪಿಎಲ್‌ನಲ್ಲಿ ಸ್ಪರ್ಧಿಸಿದವು. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಚೊಚ್ಚಲ ಆವೃತ್ತಿಯಲ್ಲೇ ಉತ್ತಮ ಪ್ರದರ್ಶನ ನೀಡಿದವು.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿದರೆ, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಎನಿಸಿಕೊಂಡಿತು. ಹಾರ್ದಿಕ್ ಪಾಂಡ್ಯ ನಾಯಕರಾಗಿ ಮೊದಲ ಯತ್ನದಲ್ಲೇ ಅದ್ಭುತ ಯಶಸ್ಸು ಸಾಧಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಬೌಲಿಂಗ್‌ಗಿಂತ ಹೆಚ್ಚಾಗಿ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಜಮ್ಮು-ಕಾಶ್ಮೀರದ ವೇಗದ ಬೌಲರ್ ಉಮ್ರಾನ್ ಮಲಿಕ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದರು.
ಆರ್ ಸಿಬಿ ತಂಡ ಸೇರಿದ ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಫಿನಿಷರ್ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ ಡಿಕೆ ಹಲವು ಪಂದ್ಯಗಳಲ್ಲಿ ಆರ್ ಸಿಬಿ ತಂಡಕ್ಕೆ ಜಯ ತಂದುಕೊಟ್ಟರು. ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಕೂಡ ಯಶಸ್ವಿಯಾದರು. 2022 ರ ಐಪಿಎಲ್‌ನಲ್ಲಿ ಕೆಲವು ಮರೆಯಲಾಗದ ಕ್ಷಣಗಳಿವು.

ಸತತ ಮೂರು ಸಿಕ್ಸರ್ ಸಿಡಿಸಿದ ಮಿಲ್ಲರ್
ಗುಜರಾತ್ ಟೈಟಾನ್ಸ್ 2022 ಐಪಿಎಲ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣೆಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 188 ರನ್ ಗಳಿಸಿದರು. 189 ರನ್‌ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ತಂಡಕ್ಕೆ ಆಸರೆಯಾಗಿದ್ದು ಡೇವಿಡ್ ಮಿಲ್ಲರ್.
ಓಬೆಡ್ ಮೆಕಾಯ್ 19ನೇ ಓವರ್ ಬೌಲ್ ಮಾಡಿದ ನಂತರ ಗುಜರಾತ್ ಟೈಟಾನ್ಸ್ ತಂಡಕ್ಕೆ ಅಂತಿಮ ಓವರ್ ನಲ್ಲಿ ಗೆಲ್ಲಲು 16 ರನ್ ಗಳಿಸಬೇಕಿತ್ತು. ಕೊನೆಯ ಓವರ್ ನಲ್ಲಿ ಮೊದಲ ಮೂರು ಎಸೆತಗಳಲ್ಲಿ ಸತತವಾಗಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು.

ಬೆಸ್ಟ್ ಫಿನಿಶರ್ ಎಂಎಸ್ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಐಪಿಎಲ್‌ನ ಎಲ್ ಕ್ಲಾಸಿಕೋ ಎಂದು ಪರಿಗಣಿಸಲಾಗಿದೆ. ಎರಡೂ ತಂಡಗಳ ನಡುವೆ ನಡೆದ ಹಲವು ಪಂದ್ಯಗಳು ರೋಮಾಂಚನಕಾರಿಯಾಗಿ ಅಂತ್ಯಗೊಂಡಿವೆ.
2022ರ ಐಪಿಎಲ್‌ನಲ್ಲಿ ಕೂಡ ಇಂತಹದ್ದೇ ಒಂದು ರೋಚಕ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 155 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಸಿಎಸ್‌ಕೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಂತಿಮ ಓವರ್ ನಲ್ಲಿ ಸಿಎಸ್‌ಕೆ ತಂಡಕ್ಕೆ ಗೆಲುವಿಗೆ 16 ರನ್ ಬೇಕಿತ್ತು.
ಜಯದೇವ್ ಉನದ್ಕತ್ ಮೊದಲ ಎಸೆತದಲ್ಲಿ ವಿಕೆಟ್ ಪಡೆದು ಸಿಎಸ್‌ಕೆ ಮೇಲೆ ಒತ್ತಡ ಹೇರಿದರು. ಕೊನೆಯ ನಾಲ್ಕು ಎಸೆತಗಳಲ್ಲಿ 15 ರನ್ ಬೇಕಿದ್ದಾಗ ಎಂಎಸ್ ಧೋನಿ, 6,4, 2 ಮತ್ತು 4 ರನ್ ಗಳಿಸುವ ಮೂಲಕ ರೋಚಕವಾಗಿ ಪಂದ್ಯವನ್ನು ಗೆದ್ದರು. ಮತ್ತೊಮ್ಮೆ ಫಿನಿಶರ್ ಎನಿಸಿಕೊಂಡರು.

ಪ್ಯಾಟ್ ಕಮಿನ್ಸ್ ಭರ್ಜರಿ ಅರ್ಧಶತಕ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನ ಆಲ್‌ರೌಂಡರ್ ಪ್ಯಾಟ್ ಕಮ್ಮಿನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಕೇವಲ 15 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು.
ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಕಮಿನ್ಸ್ ಭರ್ಜರಿ ಅರ್ಧಶತಕದ ನೆರವಿನಿಂದ 16 ಓವರ್ ಗಳಲ್ಲಿ 162 ರನ್‌ಗಳ ಗುರಿಯನ್ನು ಬೆನ್ನತ್ತಿದರು.

ಮುಂಬೈ ಇಂಡಿಯನ್ಸ್ ಬೆಂಬಲಿಸಿದ ಆರ್‌ಸಿಬಿ ಅಭಿಮಾನಿಗಳು
ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ನಾಕೌಟ್ ಹಂತಕ್ಕೆ ಪ್ರವೇಶಿಸಬೇಕಾದೆ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಲೇಬೇಕಿತ್ತು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಸಂದರ್ಭದಲ್ಲಿ ಆರ್‌ಸಿಬಿ ಅಭಿಮಾನಿಗಳು ವಾಂಖೆಡೆ ಸ್ಟೇಡಿಯಂನಲ್ಲಿ ಸೇರಿದ್ದರು.
ಪಂದ್ಯದ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡಿದರು. ಮುಂಬೈ ಇಂಡಿಯನ್ಸ್ ವಿಕೆಟ್ ಪಡೆದಾಗ, ಬೌಂಡರಿ ಗಳಿಸಿದಾಗ ಅಭಿಮಾನಿಗಳು ಆರ್‌ಸಿಬಿ ಪರವಾಗಿ ಘೋಷಣೆ ಕೂಗಿದ್ದರು. ದೂರದ ಮುಂಬೈನಲ್ಲಿ ಕೂಡ ಆರ್‌ಸಿಬಿ ಅಭಿಮಾನಿಗಳ ಬೆಂಬಲ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications