2023ರ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದೆ. ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಯುವ ಆಟಗಾರರ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಅನೇಕ ಯುವ ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಮ್ಯಾಚ್ ವಿನ್ನರ್‌ಗಳಾಗಿ ಹೊರಹೊಮ್ಮಿದ್ದಾರೆ. ಅದರಲಗ್ಲಿ ಪ್ರಮುಖವಾದವರು ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್.
ಈ ಪೈಕಿ ಶುಬ್ಮನ್ ಗಿಲ್ ಟೂರ್ನಿಒಯ ಕೊನೆಯ ಹಂತದಲ್ಲಿ ಮತ್ತಷ್ಟು ಅಮೋಘ ಪ್ರದರ್ಶನ ನೀಡುತ್ತಿದ್ದು ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಸಿಡಿಸಿದ್ದು 851 ರನ್‌ಗಳನ್ನು ಗಳಿಸಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ. ಅಲ್ಲದೆ 900 ರನ್‌ಗಳ ಸನಿಹದಲ್ಲಿದ್ದಾರೆ. ಈ ಅದ್ಭುತ ಆವೃತ್ತಿಯ ಕಾರಣಕ್ಕೆ ಎಲ್ಲೆಡೆಯಿಂದ ಸಹಜವಾಗಿಯೇ ಗಿಲ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸ್ಕಾಟ್ ಸ್ಟೈರಿಸ್ ಪ್ರತಿಕ್ರಿಯೆ ನೀಡಿದ್ದು ಶುಬ್ಮನ್ ಗಿಲ್ ವಿಚಾರವಾಗಿ ಅವರ ಈ ಹಿಂದಿನ ಫ್ರಾಂಚೈಸಿ ಕೊಲ್ಕತ್ತಾ ನೈಟ್ ರೈಡರ್ಸ್ ಬಹಳ ದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ. 2022ರ ಐಪಿಎಲ್ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಶುಬ್ಮನ್ ಗಿಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶವಿದ್ದರೂ ಕೆಕೆಆರ್ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆಗೊಳಸಿತ್ತು. ಅವರ ಬದಲಿಗೆ ವೆಂಕಟೇಶ್ ಐಯ್ಯರ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು ಕೆಕೆಆರ್. ಈ ವಿಚಾರವನ್ನು ಉಲ್ಲೇಖಿಸಿರುವ ಕಿವೀಸ್ ಮಾಜಿ ಕ್ರಿಕೆಟಿಗ ಸ್ಟೈರಿಸ್, ಗಿಲ್ ವಿಚಾರದಲ್ಲಿ ಕೆಕೆಆರ್ ದೊಡ್ಡ ತಪ್ಪು ನಿರ್ಧಾರವನ್ನು ತೆಗೆದುಕೊಂಡಿತು ಎಂದಿದ್ದಾರೆ.
ಶುಬ್ಮನ್ ಗಿಲ್ ಕಳೆದ ಶುಕ್ರವಾರ ನಡೆದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಶತಕವನ್ನು ಬಾರಿಸಿದರು. ಕೇವಲ 60 ಎಸೆತಗಳನ್ನು ಎದುರಿಸಿದ ಗಿಲ್ ಈ ಪಂದ್ಯದಲ್ಲಿ ಬರೊಬ್ಬರಿ 129 ರನ್‌ಗಳನ್ನು ಗಳಿಸಿದ ಪರಿಣಾಮವಾಗಿ ನಿರ್ಣಾಯಕ ಪಂದ್ಯದಲ್ಲಿ ಜಿಟಿ ತಂಡ 3 ವಿಕೆಟ್ ಕಳೆದುಕೊಂಡು ಬರೊಬ್ಬರಿ 233 ರನ್‌ಗಳನ್ನು ಗಳಿಸಿತ್ತು. ಈ ಇನ್ನಿಂಗ್ಸ್ 10 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಒಳಗೊಂಡಿತ್ತು.
"ಶುಬ್ಮನ್ ಗಿಲ್ ಅವರನ್ನು ಕೊಲ್ಕತ್ತಾ ನಯಟ್ ರೈಡರ್ಸ್ ತನ್ನ ತಂಡದಿಂದ ಬಿಡುಗಡೆಗೊಳಿಸಿದ್ದು ಅದು ಮಾಡಿದ ಅತಿ ದೊಡ್ಡ ಪ್ರಮಾದ" ಎಂದು ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಶುಬ್ಮನ್ ಗಿಲ್ ಭಾರತೀಯ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
"ಶುಬ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಐಪಿಎಲ್ ಫ್ರಾಂಚೈಸಿಯೊಂದು ಮಾಡಿದ ದೊಡ್ಡ ದೊಡ್ಡ ಪ್ರಮಾದ ಎಂದು ನಾನು ಭಾವಿಸುತ್ತೇನೆ. ಈ ಹಿಂದೆ ಆರ್‌ಸಿಬಿ ಕೆಎಲ್ ರಾಹುಲ್ ಅವರನ್ನು ತಂಡದಿಂದ ಬಿಟ್ಟು ಇದೇ ಪ್ರಮಾದ ಮಾಡಿತ್ತು. ಆದರೆ ಇಲ್ಲಿ ವಯಸ್ಸಿನ ಲಾಭ ಇದೆ. ಶುಬ್ಮನ್ ಗಿಲ್ ಇನ್ನು ಕೂಡ ಯುವ ಆಟಗಾರ ಆಗರುವ ಕಾರಣ ಅವರ ಆಟದಲ್ಲಿ ಸಾಕಷ್ಟು ಬೆಳವಣಿಗೆಗೆ ಅವಕಾಶವಿದೆ" ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.