
2022ರ ಡಿಸೆಂಬರ್ 20ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಶಸ್ತ್ರಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಿಷಭ್ ಪಂತ್ ಕ್ರಿಕೆಟ್‌ಗೆ ಮರಳಲು ಕನಿಷ್ಠ ಒಂದು ವರ್ಷವಾದರೂ ಸಮಯ ಬೇಕಾಗಿದೆ.
ಇದೇ ವೇಳೆ ಶನಿವಾರ, ಮಾರ್ಚ್ 25ರಂದು ಕೆಲವು ಅತಿಥಿಗಳು ತಮ್ಮ ಮನೆಗೆ ಬಂದಿಳಿದಾಗ ರಿಷಭ್ ಪಂತ್ ಅಚ್ಚರಿ ಮತ್ತು ಸಂತೋಷಗೊಂಡಿದ್ದರು. ಏಕೆಂದರೆ ಭಾರತೀಯ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ತಮ್ಮ ಸಮಯ ತೆಗೆದುಕೊಂಡು ರಿಷಭ್ ಪಂತ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದರು.
ಮಾಜಿ ಕ್ರಿಕೆಟಿಗರು ರಿಷಭ್ ಪಂತ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು ಮತ್ತು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ನಂತರ ಕ್ಯಾಮೆರಾಗೆ ಪೋಸ್ ನೀಡಿದ್ದು, ಎಲ್ಲರೂ ನಗುವಿನ ಕಡಲಲ್ಲಿ ಮಿಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ಫೋಟೋವನ್ನು ಸುರೇಶ್ ರೈನಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
"ಸಹೋದರತ್ವವೇ ಸರ್ವಸ್ವ, ಹೃದಯದಲ್ಲಿ ನಮ್ಮ ಕುಟುಂಬ ಎಂಬ ಭಾವನೆಯಿದೆ. ನಮ್ಮ ಸಹೋದರ ರಿಷಭ್ ಪಂತ್ ಅವರು ಉತ್ತಮವಾಗಿ ಮತ್ತು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ," ಎಂದು ಸುರೇಶ್ ರೈನಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ರಿಷಭ್ ಪಂತ್ ಅವರ ಬಲ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಿರುವುದನ್ನು ಕಾಣಬಹುದು. ಹೀಗಾಗಿ ಅವರು ಸಂಪೂರ್ಣವಾಗಿ ಗುಣವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. 25 ವರ್ಷದ ಕ್ರಿಕೆಟಿಗ ರಿಷಭ್ ಪಂತ್‌ಗೆ ಜನವರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಅಂದಿನಿಂದ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿರುವ ರಿಷಭ ಪಂತ್ ತಮ್ಮ ಫಿಸಿಯೋಥೆರಪಿಯನ್ನು ಸಹ ಪ್ರಾರಂಭಿಸಿದ್ದಾರೆ. ತಾನು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂಬ ಸೂಚನೆ ನೀಡಲು ಕೆಲವು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಿಷಭ್ ಪಂತ್ ಟೆರೇಸ್‌ನಲ್ಲಿ ಸಂಜೆಯ ವೇಳೆ ನಿಧಾನವಾಗಿ ನಡೆಯುವುದನ್ನು ಪೋಸ್ಟ್ ಮಾಡಿದ್ದರು. ಇತ್ತೀಚೆಗೆ ಈಜುಕೊಳದಲ್ಲಿ ಫಿಸಿಯೋನ ಕಣ್ಗಾವಲಿನಲ್ಲಿ ನಡೆಯುವುದನ್ನು ರಿಷಭ್ ಪಂತ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ತನ್ನ ಕೆಲವು ನೆಚ್ಚಿನ ಬೋರ್ಡ್ ಆಟಗಳಾದ ಕೇರಂ ಬೋರ್ಡ್ ಮತ್ತು ಚೆಸ್ ಆಡುತ್ತಾ ತನ್ನ ವಿಶ್ರಾಂತಿಯ ದಿನಗಳನ್ನು ಕಳೆಯುತ್ತಿದ್ದಾರೆ.
ಬಿಸಿಸಿಐನ ವೈದ್ಯಕೀಯ ತಂಡವು ರಿಷಭ್ ಪಂತ್ ಅವರ ಪುನರಾಗಮನದ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ. ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ನಾಯಕ ಹಾಗೂ ವಿಕೆಟ್‌ಕೀಪರ್- ಬ್ಯಾಟರ್ ಐಪಿಎಲ್ 2023 ಪಂದ್ಯಾವಳಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದಾರೆ.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಯ್ಕೆ ಮಾಡಿದ್ದರೆ, ಅಕ್ಷರ್ ಪಟೇಲ್ ತಂಡದ ಉಪನಾಯಕರಾಗಿದ್ದಾರೆ.
ಅಧಿಕೃತ ಘೋಷಣೆಗೆ ಮುಂಚೆಯೇ ಡೇವಿಡ್ ವಾರ್ನರ್ ಅವರನ್ನು ನಾಯಕನಾಗಿ ನೇಮಕ ಮಾಡಿದ್ದಕ್ಕಾಗಿ ರಿಷಭ್ ಪಂತ್ ಅಭಿನಂದಿಸಿದ್ದರು. ಡೇವಿಡ್ ವಾರ್ನರ್ ಉತ್ತಮವಾಗಿ ಮುನ್ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಂತೆ ಬೆಂಬಲಿಸಿದ್ದರು.