
2020ರಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಯಶಸ್ವಿಯಾದ ಬಳಿಕ ನಿವೃತ್ತಿ ಹೊಂದಿರುವ ಕ್ರಿಕೆಟಿಗರು ಪಾಲ್ಗೊಳ್ಳುವ ಕ್ರಿಕೆಟ್ ಟೂರ್ನಿಗಳ ಆಯೋಜನೆ ಹೆಚ್ಚಾಗುತ್ತಿದೆ. ಹೌದು, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿ ಯಶಸ್ವಿಯಾದ ಬೆನ್ನಲ್ಲೇ ಈ ವರ್ಷ ಅಂತಹದ್ದೇ ರೀತಿಯ ಮತ್ತೊಂದು ಚುಟುಕು ಕ್ರಿಕೆಟ್ ಹಣಾಹಣಿಯ ಟೂರ್ನಿಯೊಂದು ನಡೆಯಿತು. ಈ ಟೂರ್ನಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಎಂದು ನಾಮಕರಣವನ್ನು ಮಾಡಲಾಯಿತು ಹಾಗೂ ಟೂರ್ನಿಯಲ್ಲಿ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜೈಂಟ್ಸ್ ಎಂಬ 3 ತಂಡಗಳು ಸೆಣಸಾಟ ನಡೆಸಿದವು. ಹೀಗೆ ಕಡಿಮೆ ಅವಧಿಯಲ್ಲಿ ನಡೆದ ಮಾಜಿ ಕ್ರಿಕೆಟಿಗರು ಪಾಲ್ಗೊಂಡಿದ್ದ ಈ ಟೂರ್ನಿ ಕೂಡ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದುಕೊಂಡಿತು.
ಹೀಗೆ ಲೆಜೆಂಡರಿ ಕ್ರಿಕೆಟಿಗರು ಪಾಲ್ಗೊಂಡ ಈ ಎರಡೂ ಟೂರ್ನಿಗಳು ಅಮೋಘ ಯಶಸ್ಸನ್ನು ಸಾಧಿಸಿದ ನಂತರ ಇದೀಗ ಮತ್ತೊಂದು ಮಾಜಿ ಕ್ರಿಕೆಟಿಗರ ಟೂರ್ನಿಯೊಂದು ಆಯೋಜನೆಯಾಗುತ್ತಿದೆ. ಹೌದು, ಫ್ರೆಂಡ್‌ಷಿಪ್ ಟಿ10 ಕಪ್ ಎಂಬ ಹೆಸರಿನಡಿಯಲ್ಲಿ ಮಾರ್ಚ್ 5ರಿಂದ ಮಾರ್ಚ್ 7ರವರೆಗೆ ಈ ಟೂರ್ನಿ ನಡೆಯಲಿದ್ದು ಒಟ್ಟು 4 ತಂಡಗಳು ಭಾಗವಹಿಸಲಿವೆ. ಹೆಸರೇ ಹೇಳುವಂತೆ ಈ ಟೂರ್ನಿ ಸ್ನೇಹಪೂರ್ವಕವಾದ ಸೆಣಸಾಟವಾಗಿರಲಿದ್ದು, 10 ಓವರ್‌ಗಳ ಪಂದ್ಯಗಳು ನಡೆಯಲಿವೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವಿಶೇಷವಾದ ಟೂರ್ನಿ ಮಾರ್ಚ್ ತಿಂಗಳಿಗೂ ಮೊದಲೇ ನಡೆಯಬೇಕಿತ್ತು. ಆದರೆ ವಿಶ್ವದಾದ್ಯಂತ ಕೊರೋನಾ ವೈರಸ್ ಹಾವಳಿ ದಿನೇ ದಿನೇ ಹೆಚ್ಚುತ್ತಿರುವುದರಿಂದ ವಿವಿಧ ಕ್ರಿಕೆಟಿಗರಿಗೆ ಪ್ರಯಾಣಿಸುವುದು ಕಷ್ಟಕರವಾಗಿರಲಿದ್ದು, ಟೂರ್ನಿಯನ್ನು ಮಾರ್ಚ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಅರ್ಬಾ ಸ್ಪೋರ್ಟ್ಸ್ ಸಿಇಒ ಅಸ್ಲಾಂ ಗುರುಕ್ಕಲ್ ಹೇಳಿಕೆ ನೀಡಿದ್ದಾರೆ.
ಇನ್ನು ಈ ಟೂರ್ನಿಯ ಪಂದ್ಯಗಳು ಮಾರ್ಚ್ 5, ಮಾರ್ಚ್ 6 ಹಾಗೂ ಮಾರ್ಚ್ 7ರಂದು ಜರುಗಲಿದ್ದು ಎಲ್ಲಾ ಪಂದ್ಯಗಳೂ ಕೂಡ ವಿಶ್ವದಲ್ಲಿಯೇ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಯೋಜಿಸಿರುವ ದಾಖಲೆಯನ್ನು ಹೊಂದಿರುವಂತಹ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಹಾಗೂ ಈ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್, ಪಾಕಿಸ್ತಾನ್ ಲೆಜೆಂಡ್ಸ್, ವರ್ಲ್ಡ್ ಲೆಜೆಂಡ್ಸ್ 11 ಮತ್ತು ಬಾಲಿವುಡ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ.
50ಕ್ಕೂ ಹೆಚ್ಚು ಲೆಜೆಂಡರಿ ಕ್ರಿಕೆಟಿಗರು ಹಾಗೂ ಸಿನಿಮಾ ನಟರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, 3 ದಿನಗಳಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿವೆ.
ಬಾಲಿವುಡ್ ಕಿಂಗ್ಸ್ ತಂಡ ಹೇಗಿರಲಿದೆ?
ಬಾಲಿವುಡ್ ಕಿಂಗ್ಸ್ ತಂಡವನ್ನು ಬಾಲಿವುಡ್ ನಟ ಸುನಿಲ್ ಶೆಟ್ಟಿ ನಾಯಕನಾಗಿ ಮುನ್ನಡೆಸಲಿದ್ದಾರೆ. ಹಾಗೂ ಈ ತಂಡದಲ್ಲಿ ಚಲನಚಿತ್ರ ನಟ ಸೊಹೈಲ್ ಖಾನ್ ಜತೆಗೆ ಕ್ರಿಕೆಟಿಗ ಮತ್ತು ನಟರಾಗಿರುವ ಸಲಿಲ್ ಅಂಕೋಲಾ ಮತ್ತು ಶ್ರೀಶಾಂತ್ ಕೂಡ ಭಾಗವಹಿಸಲಿದ್ದಾರೆ.
ಇಂಡಿಯಾ ಲೆಜೆಂಡ್ಸ್:
ಇಂಡಿಯಾ ಲೆಜೆಂಡ್ಸ್ ತಂಡದಲ್ಲಿ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್, ಮುನಾಫ್ ಪಟೇಲ್, ಅಜಯ್ ಜಡೇಜಾ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಇರಲಿದ್ದು ಮೊಹಮ್ಮದ್ ಅಜರುದ್ದೀನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಪಾಕಿಸ್ತಾನ್ ಲೆಜೆಂಡ್ಸ್:
ಪಾಕಿಸ್ತಾನ್ ಲೆಜೆಂಡ್ಸ್ ತಂಡದ ಪರ ಯೂಸುಫ್ ಯೂಹಾನ, ಮೊಹಮದ್ ಯೂಸುಫ್, ಸಲ್ಮಾನ್ ಬಟ್ ಮತ್ತು ಇರ್ಫಾನ್ ಖಾನ್ ಸೇರಿದಂತೆ ಇನ್ನೂ ಹಲವಾರು ಕ್ರಿಕೆಟಿಗರು ಭಾಗವಹಿಸಲಿದ್ದು ಇಮ್ರಾನ್ ನಜೀರ್ ಈ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ವರ್ಲ್ಡ್ ಇಲೆವೆನ್ ಲೆಜೆಂಡ್ಸ್
ವರ್ಲ್ಡ್ ಇಲೆವೆನ್ ಲೆಜೆಂಡ್ಸ್ ತಂಡವನ್ನು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅಜಂತಾ ಮೆಂಡಿಸ್ ನಾಯಕನಾಗಿ ಮುನ್ನಡೆಸಲಿದ್ದು, ಈ ತಂಡದ ಪರ ಶ್ರೀಲಂಕಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆಯ ಮಾಜಿ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.