ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಪುತ್ರ!

ಕ್ರಿಕೆಟಿಗರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಂದು ದೇಶಕ್ಕಿಂತ ಹೆಚ್ಚು ದೇಶಗಳನ್ನು ಪ್ರತಿನಿಧಿಸಿರುವ ಹಲವಾರು ಉದಾಹರಣೆಗಳಿವೆ. ಇನ್ನು ಕೆಲ ಕ್ರಿಕೆಟಿಗರ ಮಕ್ಕಳು ತಮ್ಮ ಪೋಷಕರಂತೆ ಕ್ರಿಕೆಟ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಿಂಚಬೇಕೆಂಬ ಕನಸನ್ನು ಹೊತ್ತು ಕ್ರಿಕೆಟ್‌ನತ್ತ ಮುಖಮಾಡಿದ್ದಾರೆ. ಈ ಪಟ್ಟಿಗೆ ಸೇರಿರುವವರ ಪೈಕಿ ಭಾರತದ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಪುತ್ರ ಹ್ಯಾರಿ ಸಿಂಗ್ ಕೂಡ ಓರ್ವರು.
ಹೌದು, ಭಾರತದ ಕ್ರಿಕೆಟಿಗನ ಪುತ್ರ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸವ ಅತಿ ಅಪರೂಪದ ಘಟನೆಯಿದು. ಸದ್ಯ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಗೆ ಅಂಡರ್ 19 ತಂಡವನ್ನು ಆಯ್ಕೆ ಮಾಡಿದ್ದು, ಈ ತಂಡದಲ್ಲಿ ಆರ್ ಪಿ ಸಿಂಗ್ ಪುತ್ರ ಹ್ಯಾರಿ ಸಿಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಇಂಗ್ಲೆಂಡ್ ಅಂಡರ್ 19 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಬ್ಯಾಟ್ಸ್‌ಮನ್‌ಗಳ ನಡುವೆ ಅತಿ ದೊಡ್ಡ ಮಟ್ಟದ ಪೈಪೋಟಿ ಇದ್ದು, ಹೀಗಾಗಿಯೂ ಹ್ಯಾರಿ ಸಿಂಗ್ ಈ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದರ ಬಗ್ಗೆ ಆರ್ ಪಿ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಆರ್ ಪಿ ಸಿಂಗ್ ಇಂಡಿಯನ್ ಎಕ್ಸ್‌ಪ್ರೆಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿ "ಇತ್ತೀಚಿಗಷ್ಟೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನಿಂದ ಕರೆಬಂದಿತ್ತು, ಹ್ಯಾರಿಯನ್ನು ಇಂಗ್ಲೆಂಡ್ ಅಂಡರ್ ನೈಂಟೀನ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಆತ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಲಿದ್ದಾನೆ ಎಂದು ತಿಳಿಸಿದ್ದರು" ಎಂದು ಆರ್ ಪಿ ಸಿಂಗ್ ಹೇಳಿಕೆ ನೀಡಿದ್ದಾರೆ.

ಕಪಿಲ್ ದೇವ್ ನಾಯಕತ್ವದಲ್ಲಿ ಆಡಿದ್ದ ಆರ್ ಪಿ ಸಿಂಗ್
ಇನ್ನು ರುದ್ರ ಪ್ರತಾಪ್ ಸಿಂಗ್ 1986ರಲ್ಲಿ ಕಪಿಲ್ ದೇವ್ ನಾಯಕತ್ವದಡಿಯಲ್ಲಿ ಭಾರತ ತಂಡದ ಸದಸ್ಯನಾಗಿದ್ದರು. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟು ಎರಡು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದ ಆರ್ ಪಿ ಸಿಂಗ್ ನಂತರದ ದಿನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ. ಹೀಗಾಗಿ ನಂತರ ಇಂಗ್ಲೆಂಡ್‌ಗೆ ತೆರಳಿದ ರುದ್ರ ಪ್ರತಾಪ್ ಸಿಂಗ್ ಅಲ್ಲಿನ ಲ್ಯಾಂಕಶೈರ್ ಕ್ರಿಕೆಟ್ ಕ್ಲಬ್ ಮತ್ತು ವೇಲ್ಸ್ ಕ್ರಿಕೆಟ್ ಕ್ಲಬ್‌ಗಳ ಕೋಚ್ ಆಗಿ ಕೆಲಸ ನಿರ್ವಹಿಸಿದ್ದರು.

ಮಗನ ಭವಿಷ್ಯದ ಬಗ್ಗೆ ಸಲಹೆ ನೀಡಿದ ಆರ್ ಪಿ ಸಿಂಗ್
ಇನ್ನು ತಮ್ಮ ಮಗ ಇಂಗ್ಲೆಂಡ್ ಕಿರಿಯರ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಮಾತನಾಡಿದ ಆರ್ ಪಿ ಸಿಂಗ್ "ಇದು ಕಷ್ಟ, ಉನ್ನತ ಹಂತಕ್ಕೆ ಬರಲು ಕೆಲವು ಅದೃಷ್ಟ ಮತ್ತು ಸಾಕಷ್ಟು ರನ್‌ಗಳ ಅಗತ್ಯವಿದೆ. 1990 ರ ದಶಕದಲ್ಲಿ ದೇಶೀಯ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಹಳಷ್ಟು ಕ್ರಿಕೆಟಿಗರನ್ನು ನಾನು ನೋಡಿದ್ದೇನೆ ಆದರೆ ಭಾರತದ ರಾಷ್ಟ್ರೀಯ ತಂಡಕ್ಕಾಗಿ ಆಡುವಾಗ ತೀವ್ರ ಹಿನ್ನಡೆ ಅನುಭವಿಸಿದೆ. ತನ್ನ ತಂತ್ರವನ್ನು ಸುಧಾರಿಸಲ ಹ್ಯಾರಿ ಪ್ರಬುದ್ಧರಾಗಬೇಕು" ಎಂದು ಸಲಹೆಯನ್ನು ನೀಡಿದರು.

ಆರ್ ಪಿ ಸಿಂಗ್ ಕುರಿತು ಗೊಂದಲ ಬೇಡ
ಇನ್ನು ಈ ಸುದ್ದಿ ಕುರಿತು ಕೆಲವರು ಗೊಂದಲಕ್ಕೀಡಾಗಿದ್ದಾರೆ. ಆರ್ ಪಿ ಸಿಂಗ್ ಪುತ್ರ ಹ್ಯಾರಿ ಸಿಂಗ್‌ಗೆ ಇಂಗ್ಲೆಂಡ್ ಕಿರಿಯರ ಕ್ರಿಕೆಟ್ ತಂಡದಲ್ಲಿ ಅವಕಾಶ ಲಭಿಸಿದೆ ಎಂದು ಹಳೆಯ ಆರ್ ಪಿ ಸಿಂಗ್ ಚಿತ್ರ ಹಂಚಿಕೊಳ್ಳುವ ಬದಲಾಗಿ 2007ರ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಕಣಕ್ಕಿಳಿದು ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್ ಪಿ ಸಿಂಗ್ ಅವರ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಅಸಲಿಗೆ ಈತ ಕಪಿಲ್ ದೇವ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ವೇಗಿ ಆರ್ ಪಿ ಸಿಂಗ್ ಪುತ್ರ. ಈ ಹಿರಿಯ ಆರ್ ಪಿ ಸಿಂಗ್ 1965ರ ಜನವರಿ 6ರಂದು ಉತ್ತರ ಪ್ರದೇಶದಲ್ಲಿ ಜನಿಸಿದ್ದರು ಹಾಗೂ ಉತ್ತರ ಪ್ರದೇಶ ಮತ್ತು ಭಾರತದ ಪರ ಕೆಲ ಪಂದ್ಯಗಳಲ್ಲಿ ಆಡಿದ್ದ ಆರ್ ಪಿ ಸಿಂಗ್ ಇಂಗ್ಲೆಂಡ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications