
ಜಾರ್ಖಂಡ್ ರಾಜಧಾನಿ ರಾಂಚಿಯ ಮೀಕನ್ ಕಾಲೊನಿ ಎಂಬ ಪುಟ್ಟ ಹಳ್ಳಿ. 1981ರ ಜುಲೈ 7ರಂದು ಒಂದು ಪುಟ್ಟ ಮನೆಯಲ್ಲಿ ಹುಟ್ಟಿದ ಒಬ್ಬ ಬಡ ಹುಡುಗ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿಬಿಟ್ಟ. ಕ್ರಿಕೆಟ್ ಜಗತ್ತಿನಲ್ಲಿ ಅದ್ಭುತವನ್ನೇ ಸಾಧಿಸಿಬಿಟ್ಟ. ಅವ್ರೇ ನಮ್ಮ ಟೀಂ ಇಂಡಿಯಾ ಮಹಾನ್ ನಾಯಕ ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿಯ ಕ್ರಿಕೆಟ್ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದ್ದು ಜವಾಹರ್ ವಿದ್ಯಾ ಮಂದಿರ್ ಶಾಲೆ. ಬಾಲ್ಯದ ವಿದ್ಯಾಭ್ಯಾಸಕ್ಕೆ ಜವಾಹರ್ ವಿದ್ಯಾ ಮಂದಿರ್ ಸ್ಕೂಲ್‌ಗೆ ಸೇರಿದ ಧೋನಿ, ಪಾಠದ ಜೊತೆಗೆ ಆಟದಲ್ಲೂ ಮಿಂಚ್ತಾ ಇದ್ರು. ಆದ್ರೆ ಧೋನಿ ಆಗ ಕ್ರಿಕೆಟ್ ಬ್ಯಾಟ್ ಹಿಡಿದಿರಲಿಲ್ಲ. ಬದಲಾಗಿ ಫುಟ್ಬಾಲ್‌ನಲ್ಲಿ ಕಮಾಲ್ ಮಾಡ್ತಾ ಇದ್ರು. ಧೋನಿಗೆ ಕಾಲ್ಚೆಂಡು ಅಂದ್ರೆ ಪಂಚಪ್ರಾಣ. ಫುಟ್ಬಾಲ್ ಧೋನಿಯ ಮೊದಲ ಪ್ರೀತಿಯಾಗಿತ್ತು.
ಫುಟ್ಬಾಲ್‌ನಲ್ಲಿ ಒಳ್ಳೆಯ ಗೋಲ್ ಕೀಪರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬ್ಯಾಟ್ ಹಿಡಿಯೋದಕ್ಕೆ ಕಾರಣ ಜವಾಹರ್ ವಿದ್ಯಾ ಮಂದಿರ್ ಶಾಲೆಯ ಸ್ಪೋರ್ಟ್ಸ್ ಕೋಚ್ ಕೆ.ಬಿ.ಬ್ಯಾನರ್ಜಿ. ಇವರು ಫುಟ್ಬಾಲ್ ಬಿಟ್ಟು ಕ್ರಿಕೆಟ್ ಆಡು ಅಂತ ಧೋನಿಗೆ ಸಲಹೆ ನೀಡಿದ್ರು. ಅದೇ ಧೋನಿ ಜೀವನದ ಟರ್ನಿಂಗ್ ಪಾಯಿಂಟ್ ಆಯ್ತು.
ಫುಟ್ಬಾಲ್‌ನಿಂದ ಕ್ರಿಕೆಟ್ ಕಡೆ ಒಲವು ಬೆಳೆಸಿಕೊಂಡ ಧೋನಿ ಅಲ್ಲೇ ಬದುಕು ಕಟ್ಟಿಕೊಳ್ಳುವ ಪಣತೊಟ್ಟರು. ಒಂದಲ್ಲ ಒಂದು ದಿನ ಎಲ್ಲರೂ ತನ್ನಡೆಗೆ ನೋಡುವಂತೆ, ತನ್ನ ಬಗ್ಗೆಯೇ ಮಾತನಾಡುವಂತೆ ಮಾಡೇ ಮಾಡ್ತೀನಿ ಅನ್ನೋ ಛಲದಿಂದ ಆಡತೊಡಗಿದ್ರು. ಮೀಕನ್ ಮೈದಾನದಲ್ಲಿ ಬೆಳಗ್ಗೆ ಆರರಿಂದಲೇ ಅಭ್ಯಾಸ ಆರಂಭಿಸಿದ್ರು.
ರಾಂಚಿಯಲ್ಲಿರೋ ಮೀಕನ್ ಮೈದಾನದಿಂದಲೇ ಧೋನಿಯ ಕ್ರಿಕೆಟ್ ಪಯಣ ಆರಂಭವಾಯ್ತು. ಈ ಕ್ರೀಡಾಂಗಣಕ್ಕೆ ಬಂದಾಗ ಧೋನಿ ಕೈಯಲ್ಲಿ ಏನೂ ಇರ್ಲಿಲ್ಲ. ಮೊದಲೇ ಬಡತನದಿಂದ ಬಂದ ಹುಡುಗ. ಬರಿಗೈಯಲ್ಲಿ ಬಂದ ಧೋನಿ ಮೀಕನ್ ಮೈದಾನದಲ್ಲೇ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಗುರುವನ್ನು ಪಡೆದದ್ದು. ಧೋನಿಯೊಳಗೆ ಹುದುಗಿದ್ದ ಪ್ರತಿಭೆ, ಅವರ ಚಾಕಚಕ್ಯತೆ, ಕೌಶಲ್ಯಕ್ಕೆ ಸ್ಪಷ್ಟರೂಪ ಸಿಕ್ಕಿದ್ದು ಇಲ್ಲೇ.
ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ರಾಂಚಿಯಲ್ಲಿ ಧೋನಿ ಕ್ರಿಕೆಟ್ ಆಡ್ತಿದ್ದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡವರೇ. ಯಾಕಂದ್ರೆ ಅದಕ್ಕೂ ಮುಂಚೆ ರಾಂಚಿಯ ಜನರಿಗೆ ಕ್ರಿಕೆಟ್ ಬಗ್ಗೆ ಇದ್ದ ಪ್ರೀತಿ ಅಷ್ಟಕ್ಕಷ್ಟೇ. ಸತತ ಅಭ್ಯಾಸದ ಫಲವಾಗಿ ಧೋನಿ ಬಹುಬೇಗ ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಹತ್ತೊದಕ್ಕೆ ಶುರು ಮಾಡಿದ್ರು. ಯಾವ ಜನ ಆಶ್ಚರ್ಯಚಕಿತದಿಂದ ಧೋನಿಯನ್ನು ನೋಡಿದ್ರೋ, ಅದೇ ಜನ ಧೋನಿ ರಾಷ್ಟ್ರೀಯ ಮಟ್ಟದ ಟೂರ್ನಿಯೊಂದಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಧೋನಿಯನ್ನು ಮನೆಮಗನ ರೀತಿ ಪ್ರೋತ್ಸಾಹಿಸಿದರು. ಅಂದು ಆ ಜನ ತೋರಿಸಿದ ಪ್ರೀತಿಗೆ, ನೀಡಿದ ಪ್ರೋತ್ಸಾಹಕ್ಕೆ ಬೆಲೆಕಟ್ಟೋದಕ್ಕೆ ಸಾಧ್ಯಾನೇ ಇಲ್ಲ. ಆ ನಿಷ್ಕಲ್ಮಶ ಪ್ರೀತಿ ಧೋನಿಗೆ ಆನೆ ಬಲ ತಂದುಕೊಟ್ಟಿತ್ತು.
ಮಹೇಂದ್ರ ಸಿಂಗ್ ಧೋನಿ ವೇಗವಾಗಿ ಬೆಳೆಯುತ್ತಾ ಹೋದರು ನಿಜ. ಆದರೆ ಕ್ರಿಕೆಟ್ ಕಿಟ್ ಕೊಳ್ಳೋದಕ್ಕೆ ದುಡ್ಡು ಹೊಂದಿಸೋದೇ ಕಷ್ಟವಾಗಿತ್ತು. ಅಂತಹ ಸಂದರ್ಭದಲ್ಲಿ ಧೋನಿಯ ನೆರವಿಗೆ ಬಂದದ್ದು ಖ್ಯಾತ ಕ್ರಿಕೆಟ್ ಸಲಕರಣೆಗಳ ಕಂಪೆನಿ ಬಾಸ್. ಧೋನಿಯ ಪ್ರೀತಿಯ ಸೋಮಿ ಅಂಕಲ್ ಎನ್ನುವ ವ್ಯಕ್ತಿಯೊಬ್ಬರು ಬಾಸ್ ಕಂಪೆನಿಯಿಂದ ಧೋನಿಗೆ ಕ್ರಿಕೆಟ್ ಕಿಟ್ ಕೊಡಿಸಿದ್ರು.
ಧೋನಿ ಮೊದಲ ರಣಜಿ ಪಂದ್ಯ ಆಡಿದಾಗ ಬಾಸ್ ಕಂಪೆನಿಯೇ ಎಲ್ಲವನ್ನೂ ನೀಡಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದ ಧೋನಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯೋದು ಕೆಲವೇ ದಿನಗಳ ಮಾತಾಗಿತ್ತು. ನೋಡ ನೋಡುತ್ತಿದ್ದಂತೆ ರಾಂಚಿ ರಾಜಕುಮಾರ ದೇಶದ ಕೋಟ್ಯಾಂತರ ಜನರ ಪ್ರೀತಿಯ ಮಾಹಿಯಾಗಿಬಿಟ್ಟಿದ್ರು.
ಭಾರತೀಯರ ಕನಸನ್ನ ನನಸು ಮಾಡಿದ್ದು ಇದೇ ಧೋನಿ!: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಕಾಲಿಟ್ಟ ಮೇಲೆ ಮಾಡಿದ ಸಾಧನೆ ಅದ್ಭುತ. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ಧೋನಿ, 2011ರ ವಿಶ್ವಕಪ್‌ನಲ್ಲೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿಬಿಟ್ರು. 28 ವರ್ಷಗಳಿಂದ ಮರೀಚಿಕೆಯಾಗಿ ಉಳಿದಿದ್ದ ವಿಶ್ವಕಪ್, ಧೋನಿ ನಾಯಕತ್ವದಲ್ಲಿ ದೇಶದ ಮುಡಿಗೇರಿದಾಗ ಇತಿಹಾಸವೇ ನಿರ್ಮಾಣವಾಗಿಬಿಟ್ಟಿತ್ತು. ಇದು ಮಹೇಂದ್ರ ಸಿಂಗ್ ಧೋನಿ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಸಾಧನೆ.
ಧೋನಿ ಕಮಾಲ್ ಮಾಡಿದ್ದು ಬರೀ ಆಟದಲ್ಲಿ ಮಾತ್ರ ಅಲ್ಲ. ಧೋನಿಯ ಒಂದೊಂದು ಹಾವಭಾವ ಯುವಜನತೆಯನ್ನು ಆಕರ್ಷಿಸಲಾರಂಭಿಸಿತ್ತು. ದೇಶದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದವರಿಗೆ ಮಾಹಿ ಸ್ಟೈಲ್ ಐಕಾನ್ ಆಗಿಬಿಟ್ರು.
ಮಹೇಂದ್ರ ಧೋನಿ ಟೀಮ್ ಇಂಡಿಯಾವನ್ನು ಪ್ರವೇಶಿಸಿ, ತಂಡದ ನಾಯಕನಾಗಿ ನನಸು ಮಾಡಿಕೊಂಡದ್ದು ಬರೀ ತನ್ನ ಕನಸನ್ನು ಮಾತ್ರವಲ್ಲ. ಇಡೀ ದೇಶದ ಕನಸನ್ನೇ ಸಾಕಾರಗೊಳಿಸಿಬಿಟ್ರು. ರಾಂಚಿಯ ಯಾವುದೋ ಹಳ್ಳಿಯೊಂದರಲ್ಲಿ ಎಲೆಮರೆಯ ಕಾಯಿಯಂತೆ ಕಳೆದೇ ಹೋಗಬೇಕಿದ್ದ ಎಂ.ಎಸ್.ಧೋನಿ ಈಗ ಇಡೀ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ನಿಜಕ್ಕೂ ಧೋನಿಯ ಜೀವನ ಚರಿತ್ರೆ, ಅವ್ರ ಯಶೋಗಾಥೆ .ಯುವ ಪ್ರತಿಭೆಗಳಿಗೆ ಸ್ಫೂರ್ತಿ. ಧೋನಿಯ ಈ ಸಾಧನೆಗೆ ಹ್ಯಾಟ್ಸಾಫ್ ಹೇಳಲೇಬೇಕು.