ಪಾಕಿಸ್ತಾನದ ಸ್ಟಾರ್ ಆಟಗಾರ ಹಾಗೂ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ದಶಕಗಳ ಕಾಲ ಪಾಕಿಸ್ತಾನ ತಂಡದ ಭಾಗವಾಗಿದ್ದರು. ಪಾಕ್ ಮೂರು ಮಾದರಿಗಳಲ್ಲಿ ಕಣಕ್ಕೆ ಇಳಿದಿರುವ ಸರ್ಫರಾಜ್ ಅಹ್ಮದ್, ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ತಂಡದ ನಾಯಕತ್ವವನ್ನು ವಹಿಸಿದ್ದರು.
ನಿವೃತ್ತಿ ಘೋಷಿಸಿದ ಬಳಿಕ ಸರ್ಫರಾಜ್ ಅಹ್ಮದ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ದೇಶವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವ. 2006ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದಾಗಿನಿಂದ 2017ರ ಚಾಂಪಿಯನ್ಸ್ ಟ್ರೋಫಿ ಎತ್ತಿರುವುದು ನಿಜಕ್ಕೂ ಸಂತಸದ ಕ್ಷಣವಾಗಿದೆ. ತಂಡದ ಸದಸ್ಯರು, ತರಬೇತುದಾರರು, ಕುಟುಂಬ ಮತ್ತು ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ದೇಶವನ್ನು ಪ್ರತಿನಿಧಿಸುವುದು ಹಾಗೂ ಪಾಕ್ ತಂಡವನ್ನು ಮುನ್ನಡೆಸುವುದು ಕನಸಾಗಿತ್ತು ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಸರ್ಫರಾಜ್ ಅಹ್ಮದ್‌ಗೂ ಸ್ಥಾನ. ಇವರು ಮೂರು ಸ್ವರೂಪಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕ್ ತಂಡವನ್ನು ಮುನ್ನಡೆಸಿದ್ದಾರೆ. ಇವರು ಮುಂದಾಳತ್ವದಲ್ಲಿ ಪಾಕ್ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಪಡೆದಿತ್ತು. ಇವರ ನಾಯಕತ್ವದಲ್ಲಿ ಪಾಕಿಸ್ತಾನ ಸತತ 11 ಟಿ20 ಸರಣಿಗಳನ್ನು ಗೆದ್ದಿದ್ದು, ಆರು ಬಾರಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ವಿಶ್ವದ ದಾಖಲೆ ಹೊಂದಿದೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಇಂಗ್ಲೆಂಡ್‌ನ ಓವಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ 180 ರನ್‌ಗಳ ಜಯ ಸಾಧಿಸಿತ್ತು. ಪಾಕಿಸ್ತಾನ ತಂಡ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಾಧನೆ ಮಾಡಿತ್ತು. ಈ ಸಾಧನೆ ಮಾಡುವಲ್ಲಿ ಸರ್ಫರಾಜ್ ಅಹ್ಮದ್ ಪಾತ್ರ ದೊಡ್ಡದು. 2006ರಲ್ಲಿ ಪಾಕ್ ಅಂಡರ್ 19 ವಿಶ್ವಕಪ್ ಗೆದ್ದಾಗಲೂ ಸರ್ಫರಾಜ್ ಅಹ್ಮದ್ ಮಹತ್ವದ ಕೊಡುಗೆ ನೀಡಿದ್ದರು.

ಸರ್ಫರಾಜ್ ನಾಯಕತ್ವದಲ್ಲಿ ಹಲವು ಯುವ ಆಟಗಾರರು ತಂಡ ಸೇರಿ, ಮಿಂಚಿದ್ದಾರೆ. ಇವರ ನಾಯಕತ್ವದಲ್ಲಿ ಯುವ ಆಟಗಾರರನ್ನು ಗುರುತಿಸುವಲ್ಲಿ ಇವರು ಶ್ರಮಿಸಿದ್ದಾರೆ. ಇವರ ನಾಯಕತ್ವದಲ್ಲಿ ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಇಮಾಮ್-ಉಲ್-ಹಕ್, ಫಖರ್ ಜಮಾನ್, ಶಾದಾಬ್ ಖಾನ್ ಮತ್ತು ಫಹೀಮ್ ಅಶ್ರಫ್‌ರಂತಹ ಆಟಗಾರರು ಸೇರಿದ್ದಾರೆ.
38 ವರ್ಷದ ಸರ್ಫರಾಜ್ ಅಹ್ಮದ್ ಪಾಕ್ ಪರ 54 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 37.41ರ ಸರಾಸರಿಯಲ್ಲಿ 3031 ರನ್ ಕಲೆ ಹಾಕಿದ್ದಾರೆ. ಈ ವೇಳೆ 4 ಶತಕ ಹಾಗೂ 21 ಅರ್ಧಶತಕ ಸಿಡಿಸಿದ್ದಾರೆ. ಇನ್ನು 117 ಏಕದಿನ ಪಂದ್ಯಗಳನ್ನು ಆಡಿರುವ ಸರ್ಫರಾಜ್ 33ರ ಸರಾಸರಿಯಲ್ಲಿ 2315 ರನ್ ಕಲೆ ಹಾಕಿದ್ದು, ಇದರಲ್ಲಿ 2 ಶತಕ, 11 ಅರ್ಧಶತಕಗಳು ಬಾರಿಸಿದ್ದಾರೆ. 51 ಟಿ20 ಪಂದ್ಯಗಳನ್ನು ಆಡಿರುವ ಸರ್ಫರಾಜ್ 818 ರನ್ ಕಲೆ ಹಾಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು 315 ಕ್ಯಾಚ್ ಪಡೆದಿದ್ದಾರೆ.