ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲು ಕಂಡಿದೆ. ಅಂದಿನಿಂದ ಪಾಕ್ ನಿರಂತರವಾಗಿ ಟೀಕೆಗೊಳಾಗುತ್ತಿದೆ. ಆಗಸ್ಟ್ 30ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯ ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಈ ಪಂದ್ಯಕ್ಕೆ ಒಂದು ದಿನ ಬಾಕಿ ಇರುವಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ (ಪಿಸಿಬಿ) ಮಾಜಿ ಆಟಗಾರ ಗೆಲುವಿನ ಸೂತ್ರವನ್ನು ಹೇಳಿದ್ದಾರೆ. ಭಾರತವನ್ನು ನೋಡಿ ಕಲಿಯಿರಿ ಎಂದು ಪಿಸಿಬಿಗೆ ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.

ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ನಂತರ ಏಕದಿನ ಪಂದ್ಯಾವಳಿಯನ್ನು ಆಡಲಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಪಿಸಿಬಿಗೆ ಗೆಲುವಿನ ಸೂತ್ರವನ್ನು ನೀಡಿದ್ದಾರೆ. ಅವರು ಏಕದಿನ ಸರಣಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಆಟಗಾರರನ್ನು ದುರ್ಬಲ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಆಟಗಾರರ ಸಮೂಹವನ್ನು ಹೆಚ್ಚಿಸಲು ರೆಡ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಬೇಕು. ಇದಕ್ಕೆ ಭಾರತವನ್ನು ಅನುಸರಿಸುವಂತೆ ಸಲಹೆ ಕೊಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಬಸಿತ್ ಅಲಿ ಪಿಸಿಬಿಗೆ ಬಿಸಿ ಮುಟ್ಟಿಸಿದ್ದಾರೆ.
'ಟೆಸ್ಟ್ ಸರಣಿಯ ನಂತರ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಕಪ್ ಏಕದಿನ ಟೂರ್ನಿ ಆರಂಭವಾಗಲಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ವ್ಯವಸ್ಥೆಯನ್ನು ಪಾಕಿಸ್ತಾನ ನಕಲು ಮಾಡುತ್ತಿದೆ. ಭಾರತ ನಮ್ಮ ಪಕ್ಕದಲ್ಲಿದೆ, ದಯವಿಟ್ಟು ಅವರ ವ್ಯವಸ್ಥೆಯನ್ನು ಸಹ ನಕಲು ಮಾಡಿ. ನಕಲು ಮಾಡುವಲ್ಲಿ ಬುದ್ಧಿವಂತಿಕೆಯೂ ಬೇಕು. ಭಾರತ ಏನು ಮಾಡುತ್ತಿದೆ ಎಂಬುದನ್ನು ನಕಲಿಸಿ' ಎಂದು ಹೇಳಿದ್ದಾರೆ.
ಮತ್ತೊಂದೆಡೆ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್- ಬ್ಯಾಟರ್ ರಶೀದ್ ಲತೀಫ್ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭಾರತ ಬರುವುದು ಶೇಕಡಾ 50 ರಷ್ಟು ಖಚಿತ ಎಂದು ಹೇಳಿದ್ದಾರೆ. 'ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಬೆಂಬಲ ನೀಡಿದೆ ಎಂದರ್ಥ. ಈ ಬೆಳವಣಿಗೆಯು ಭಾರತವು ಪಾಕಿಸ್ತಾನಕ್ಕೆ ಬರುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ದೇಶಿ ಕ್ರಿಕೆಟ್‌ನಲ್ಲಿ ಭಾರೀ ಪೈಪೋಟಿ ಇದೆ. ದೇಶಾದ್ಯಂತ ಸಾಕಷ್ಟು ಕ್ರಿಕೆಟಿಗರು ಇರುವುದರಿಂದ ದುಲೀಪ್ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಆಟಗಾರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬಿಸಿಸಿಐ ಇಂತಹ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಿದೆ.
ದೇಶದಲ್ಲಿ ಲಭ್ಯವಿರುವ ಪ್ರತಿಭಾವಂತ ಆಟಗಾರರನ್ನು ಮುಂದೆ ತರುವುದು ಬಿಸಿಸಿಐನ ಉದ್ದೇಶವಾಗಿದೆ.
ಸ್ಥಳೀಯ ಭಾರತೀಯ ಆಟಗಾರರು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಸುಲಭವಾಗಿ ಸ್ಥಾನ ಪಡೆಯಲು ಇದೊಂದು ಮಾರ್ಗವಾಗಿದೆ.