ವಿಶ್ವಕ್ರಿಕೆಟ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಬೆಳವಣಿಗೆಯ ದಾರಿಯಲ್ಲಿ ಸಾಗುತ್ತಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸುವ ಮೂಲಕ ಅಫ್ಘಾನ್ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸಿತ್ತು. ಇದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಬೆಂಬಲ ಮುಖ್ಯ ಕಾರಣ.
ಈಗ ಟೀಮ್ ಇಂಡಿಯಾದ ಮಾಜಿ ಕೋಚ್ ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ನೀಡುವುದನ್ನು ಕಾಣಬಹುದಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ಎಸಿಬಿ) ಈ ಅನುಭವಿ ಕೋಚ್‌ಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ.

ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ಮಾಜಿ ಫೀಲ್ಡಿಂಗ್ ಕೋಚ್ ರಾಮಕೃಷ್ಣನ್ ಶ್ರೀಧರ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಎಸಿಬಿ ಬುಧವಾರ ನೇಮಕ ಮಾಡಿದೆ. ಸಾಮಾಜಿಕ ಜಾಲತಾಣ ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡುವ ಮೂಲಕ ಎಸಿಬಿ ಈ ಬಗ್ಗ ಮಾಹಿತಿ ನೀಡಿದೆ.
54 ವರ್ಷದ ರಾಮಕೃಷ್ಣನ್ ಶ್ರೀಧರ್ ಅವರು, ಆಗಸ್ಟ್ 2014 ರಿಂದ ನವೆಂಬರ್ 2021 ರವರೆಗೆ 7 ವರ್ಷಗಳ ಕಾಲ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ 35 ಪ್ರಥಮ ದರ್ಜೆ ಮತ್ತು 15 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, ಆಟದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ.
ತಲಾ ಎರಡು ಐಸಿಸಿ ಏಕದಿನ ಮತ್ತು ಟಿ20 ವಿಶ್ವಕಪ್‌ಗಳು ಸೇರಿದಂತೆ 300 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೀಧರ್ ಭಾರತದ ಕೋಚಿಂಗ್ ಸಿಬ್ಬಂದಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದರು.
ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಜೊತೆಗಿನ ಅವರ ತರಬೇತಿಯಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತ್ತು. ಪಂಜಾಬ್ ತಂಡದಲ್ಲಿ ಅವರು 2014 ರಿಂದ 2017 ರವರೆಗೆ ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ 2014ರಲ್ಲಿ ಪಂಜಾಬ್ ಐಪಿಎಲ್ ಫೈನಲ್ ತಲುಪಿತು.
ಹೆಚ್ಚುವರಿಯಾಗಿ, ಶ್ರೀಧರ್ ಭಾರತದ ಯುವ ಕ್ರಿಕೆಟ್‌ಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಭಾರತ ಅಂಡರ್ -19 ರಾಷ್ಟ್ರೀಯ ತಂಡಕ್ಕೆ ಅವರು ಸಹಾಯಕ ತರಬೇತುದಾರ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ 2014 ರವರೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಆಫ್ ಇಂಡಿಯಾದಲ್ಲಿ ಸಹಾಯಕ ಫೀಲ್ಡಿಂಗ್ ಮತ್ತು ಸ್ಪಿನ್ ಬೌಲಿಂಗ್ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.